

ಮೈಸೂರು: ಮೈಸೂರು ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘ ಸೆ.29ರಂದು ಉದ್ಘಾಟನೆಗೊಳ್ಳಲಿದೆ.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅನೌಪಚಾರಿಕ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಎಂ.ರಾಮಯ್ಯ ಅವರು, ಕಲಾಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಸಂಘದ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ.ಶಿವಸ್ವಾಮಿ ಮಾತನಾಡಿ, ರಾಜ್ಯದಲ್ಲೇ ಪ್ರಥಮವಾಗಿ ಬಿಸಿಎಂ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮೈಸೂರಿನಲ್ಲಿ ಉದ್ಘಾಟನೆ ಮಾಡಲಾಗುವುದು. ಬಿಸಿಎಂ ಹಾಸ್ಟೆಲ್‌ನ ಪಿತಾಮಹ ಡಿ.ದೇವರಾಜ ಅರಸು ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಬ್ಬರೂ ಮೈಸೂರು ಜಿಲ್ಲೆಯವರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು, ಶಾಸಕರು ಭಾಗವಹಿಸುವುದರಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಬೇಕು. ಬಿಸಿಎಂ ಹಾಸ್ಟೆಲ್‌ನ ಹಳೆಯ ವಿದ್ಯಾರ್ಥಿಗಳು, ನಿವೃತ್ತ ನೌಕರರು, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಆಹ್ವಾನಿಸಬೇಕು. ಸ್ವಾಗತ ಸಮಿತಿ, ವೇದಿಕೆ, ಆಹಾರ, ಆಹ್ವಾನ ಪತ್ರಿಕೆ, ಮಾಧ್ಯಮ ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ಮುಖ್ಯಮಂತ್ರಿಗಳ ವಿಶೇಷಾಧಿಕಾರಿಯೂ ಆದ ಸಂಘದ ಉಪಾಧ್ಯಕ್ಷ ಆರ್.ಮಹಾದೇವ್, ಕಾರ್ಯದರ್ಶಿ ಬಿ.ಪಿ.ರಾಜೇಶ್, ಖಜಾಂಚಿ ಕೆ.ರುಕ್ಮಾಂಗದ, ಜಂಟಿ ಕಾರ್ಯದರ್ಶಿ ರಮೇಶ್‌ಗೌಡ, ತಹಸೀಲ್ದಾರ್ ಮುರಡಗಳ್ಳಿ ಮಂಜುನಾಥ್, ಮುಖಂಡರಾದ ಅಹಿಂದ ಜವರಪ್ಪ, ಡಾ.ಮಾಲೇಗೌಡ, ಪ್ರಕಾಶ್, ಶಿವಕುಮಾರ್ ಇತರರಿದ್ದರು.