ಮೇಲುಕೋಟೆ ಅನ್ನಪ್ರಸಾದ ಭವನ ಉದ್ಘಾಟನೆ

7mlk01
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದ ಅನ್ನಪ್ರಸಾದ ಭವನದಲ್ಲಿ ನಿತ್ಯಾನ್ನದಾನವನ್ನು ಭಕ್ತರಿಗೆ ಪ್ರಸಾದ ಬಡಿಸುವ ಮೂಲಕ ಸಚಿವ ಚಲುವರಾಯಸ್ವಾಮಿ ಆರಂಭಿಸಿದರು.
Published on

ಮೇಲುಕೋಟೆ: ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ದಂಪತಿ ಅನ್ನಪ್ರಸಾದ ಭವನದಲ್ಲಿ ಭಕ್ತರಿಗೆ ಪುಳಿಯೋಗರೆ ಬಡಿಸುವ ಮೂಲಕ ನಿತ್ಯಾನ್ನದಾನ ಆರಂಭಿಸಿದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಭಕ್ತರ ಜತೆ ಕುಳಿತು ಪ್ರಸಾದ ಸ್ವೀಕರಿಸಿದರು.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದೇವರದರ್ಶನ ಪಡೆದ ನಂತರ ಮಧ್ಯಾಹ್ನ ಕಲ್ಯಾಣಿ ಬಳಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅನ್ನದಾನ ಭವನದಲ್ಲಿ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ಮೇಲುಕೋಟೆ ಪರಂಪರೆಯಂತೆ ಸಿದ್ಧಪಡಿಸಿದ್ದ ಸಕ್ಕರೆಪೊಂಗಲ್, ಪುಳಿಯೋಗರೆ ಮೊಸರನ್ನವನ್ನು ಭಕ್ತರಿಗೆ ವಿತರಿಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸದ್ಯ ಶನಿವಾರ, ಭಾನುವಾರ ರಜಾದಿನಗಳಂದು ಅನ್ನದಾನ ಮಾಡಲಾಗುತ್ತದೆ. ನಂತರ ದಿನಗಳಲ್ಲಿ ನಿತ್ಯ ಅನ್ನದಾನ ಆರಂಭಿಸಲಾಗುತ್ತದೆ. ಮೇಲುಕೋಟೆಗೆ ಬರುವ ಭಕ್ತರು ಈ ಸೌಲಭ್ಯ ಬಳಕೆಮಾಡಿಕೊಳ್ಳಬೇಕು ಎಂದರು.

ಮೇಲುಕೋಟೆಯಲ್ಲಿ ಮುಖ್ಯಮಂತ್ರಿಗಳೇ ಉದ್ಘಾಟಿಸಿದ್ದರೂ ಮೂರು ವರ್ಷಗಳಿಂದ ಬಳಕೆ ಮಾಡದೆ ಇದ್ದ ಅನ್ನದಾನಭವನ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಸಕ್ತಿಯ ಪರಿಣಾಮ ಭಕ್ತರ ಉಪಯೋಗಕ್ಕೆ ಬರುವಂತಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಎರಡು ಕೋಟಿ ರೂ. ಅನುದಾನದಲ್ಲಿ ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜು ಮಾರ್ಗದರ್ಶನದಲ್ಲಿ ಅನ್ನದಾನ ಭವನ ನಿರ್ಮಾಣವಾಗಿದ್ದು, ಇದೀಗ ಭಕ್ತರ ಬಳಕೆಗೆ ಲಭ್ಯವಾಗಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ತಾಲೂಕು ಪಂಚಾಯಿತಿ ಇಒ ಲೋಕೇಶ್, ಕೆಪಿಸಿಸಿ ಸದಸ್ಯ ತ್ಯಾಗರಾಜು, ಕಾಡೇನಹಳ್ಳಿ ರಾಮಚಂದ್ರು ದೇವಾಲಯದ ಇಒ ಶೀಲಾ, ದರ್ಶನ್ ಸಹೋದರ ರಾಘು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ ಧನಲಕ್ಷ್ಮೀ ದಂಪತಿ ದೇಗುಲದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಯೋಗನರಸಿಂಹಸ್ವಾಮಿ ದೇಗುಲದ ಅರ್ಚಕ ನಾರಾಯಣಭಟ್ಟರ್ ಮಂಗಳವಾದ್ಯದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net