

ಬಂಟ್ವಾಳ: ಹೃದಯ ಶುದ್ಧಿಯಿಂದ ಕೈಗೊಂಡ ಸತ್ಕರ್ಮಗಳು ಮಾತ್ರ ಫಲಪ್ರದವಾಗಲಿದೆ. ಮಸೀದಿ ನಿರ್ಮಾಣದಂತಹ ಉತ್ತಮ ಕೆಲಸಗಳು ಇದೇ ಸಾಲಿನಲ್ಲಿ ಒಳಪಡುತ್ತದೆ ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ನವೀಕೃತ ಕಟ್ಟಡವನ್ನು ಬುಧವಾರ ಉದ್ಘಾಟಿಸಿ, ದುವಾಶಿರ್ವಚನಗೈದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜಾತ್ಯತೀತ, ಸಾಮರಸ್ಯದ ಭಾರತ ಕಟ್ಟುವಲ್ಲಿ ನಾಯಕನಾದವನು ವೇದಿಕೆಯಲ್ಲಿ ಮಾತಿನ ಮಂಟಪ ಕಟ್ಟುವ ಬದಲು ವೈಯಕ್ತಿಕ ನಡವಳಿಕೆ ಉತ್ತಮವಾದುದನ್ನು ಮೈಗೂಡಿಸಿಕೊಂಡಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು.
ಮಸೀದಿ ಅಧ್ಯಕ್ಷ ಯೂಸುಫ್ ಕರಂದಾಡಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಅಶ್ವನಿ ಕುಮಾರ್ ರೈ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸಜಿಪಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಎಂ.ಪರಮೇಶ್ವರ ಇದ್ದರು. ಮಸೀದಿ ಅಧ್ಯಕ್ಷ ಯೂಸುಫ್ ಕರಂದಾಡಿ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.