

ಹರಿಹರ: ಸೂರ್ಯ, ಚಂದ್ರ ಇರುವತನಕ ವಿಜ್ಞಾನ ಬೆಳೆಯುತ್ತಲೇ ಇರುತ್ತದೆ. ಅದಕ್ಕೆ ಕೊನೆ ಎಂಬುದಿಲ್ಲ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಸೆಂಟ್ ಮೇರಿಸ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಶನಿವಾರ ನೂತನ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನದ ಬೆಳವಣಿಗೆ ನಿರಂತರವಾಗಿದ್ದು, ನಿತ್ಯ ಹೊಸ ಹೊಸ ಅವಿಷ್ಕಾರ ಆಗುತ್ತಲೆ ಇರುತ್ತವೆ ಎಂದರು.
ನಮ್ಮ ದೇಶದ ವಿಜ್ಞಾನಿಗಳು ಈಗಾಗಲೆ ಚಂದ್ರನ ಬಳಿ ಹೋಗಿ ಬರುವುದನ್ನು ಕರಗತ ಮಾಡಿಕೊಂಡಿದ್ದಾರೆ. ಹಾಗಾಗಿ, ನೀವು ಸದಾ ಪ್ರಯೋಗಶೀಲರಾಗಿರಬೇಕು. ವಿಜ್ಞಾನದ ಬಗೆಗಿನ ಕುತೂಹಲ ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಶೀಲಾ ಮೇರಿ ಮಾತನಾಡಿ, ನಮ್ಮ ಪ್ರೌಢಶಾಲೆಗೆ ವಿಜ್ಞಾನ ಪ್ರಯೋಗಾಲಯದ ಅವಶ್ಯಕತೆ ಇತ್ತು. ಈ ದಿನ ಪ್ರಯೋಗಾಲಯ ಆರಂಭವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಜಾನ್ ಸ್ಟೆಫೆನ್, ಸಿಸ್ಟರ್ ಮಾರ್ಟಿನಲ್, ಸಿಸ್ಟರ್ ಮೇರಿಲ್, ಸಿಸ್ಟರ್ ಕ್ರಿಸ್ಟಿನ್, ಮಧುಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.