ಪ್ರಯಾಣಿಸಿ ಸಂಭ್ರಮಿಸಿದ ಜನ

train
ವಿಶೇಷ ರೈಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರವ ಸಾರ್ವಜನಿಕರು.
Published on

ಕುಷ್ಟಗಿ: ಪಟ್ಟಣದ ರೈಲು ನಿಲ್ದಾಣದ ಉದ್ಘಾಟನೆ ಜತೆ ರೈಲು ಸಂಚಾರಕ್ಕೆ ಗುರುವಾರ ಚಾಲನೆ ನೀಡಲಾಯಿತು. ವಿಶೇಷ ರೈಲಿನ ಜತೆಗೆ ಈ ಭಾಗದ ಜನರ ಬಹುದಿನದ ಕನಸು ನನಸಾದಂತಾಯಿತು.

ಹೂಗಳಿಂದ ಅಲಂಕರಿಸಿದ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ರೈಲು ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಬೆಳಗ್ಗೆಯಿಂದ ನಿಲ್ದಾಣದಲ್ಲಿ ಜಮಾವಣೆಗೊಂಡಿದ್ದ ಸಾವಿರಾರು ಜನ ವಿಶೇಷ ರೈಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಮೊದಲ ಬಾರಿ ತಾಲೂಕಿಗೆ ಬಂದ ರೈಲಿನಲ್ಲಿ ಸಂಚರಿಸಲು ಕಾತುರದಿಂದ ಕಾದು ಕುಳಿತ್ತಿದ್ದ ಜನ ಟಿಕೆಟ್ ಕೌಂಟರ್ ಮುಂದೆ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದರು. ಯಲಬುರ್ಗಾ ತಾಲೂಕಿನ ತಳಕಲ್‌ವರೆಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸುತ್ತಿದ್ದಂತೆ ಸಾರ್ವಜನಿಕರು ರೈಲು ಏರಿ ಪ್ರಯಾಣದ ಅನುಭವ ಪಡೆದರು.

ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗ ರಚನೆ ಹಾಗೂ ಕುಷ್ಟಗಿ-ನರಗುಂದ-ಘಟಪ್ರಭಾ ಇನ್ನಿತರ ಹೊಸ ಮಾರ್ಗಗಳ ಬೇಡಿಕೆ ಈಡೇರಿಸುವಂತೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಹಾಗೂ ರೈಲ್ವೆ ಹೋರಾಟ ಸಮಿತಿಯಿಂದ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಲಾಯಿತು.

ಮೂವತ್ತು ವರ್ಷದ ಕನಸು ನನಸಾಗಿದೆ. ನಮ್ಮ ಕಾಲಾವಧಿಯಲ್ಲಿ ರೈಲು ಕಾಣುತ್ತೇವೆಯೋ ಇಲ್ಲವೋ ಎನ್ನುವಂತಾಗಿತ್ತು. ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಂಡು ಸಂಚಾರ ಆರಂಭವಾಗಿರುವುದು ಸಂತಸ ತಂದಿದೆ. ಉದ್ಘಾಟನೆಗೆ ಬಂದಿದ್ದ ವಿಶೇಷ ರೈಲಿನಲ್ಲಿ ಕುಳಿತು ಸಂಭ್ರಮಿಸಿದ್ದು ವಿಶೇಷ ಅನುಭವ.

ಬಸವರಾಜ ಹಜಾಳ

ಸ್ಥಳೀಯ ನಿವಾಸಿ, ಕುಷ್ಟಗಿ

ತಾಲೂಕಿನಲ್ಲಿ ಈ ವರೆಗೆ ಯಾವುದೇ ರೈಲು ಮಾರ್ಗ ಹಾದು ಹೋಗಿರಲಿಲ್ಲ. ನಮ್ಮ ಭಾಗದಲ್ಲಿ ರೈಲು ಸಂಚರಿಸಬೇಕು ಎನ್ನುವುದು ಎಲ್ಲರ ಕನಸಾಗಿತ್ತು. ಕುಷ್ಟಗಿಯಿಂದ ಗದಗ, ಹುಬ್ಬಳ್ಳಿ ಕಡೆ ಸಂಚರಿಸಲು ಅನುಕೂಲವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೂ ಸಂಪರ್ಕ ಕಲ್ಪಿಸುವಂತಾದರೆ ಇನ್ನೂ ಅನುಕೂಲವಾಗಲಿದೆ.

ವರ್ಣಾ ಕೋರಾ

ಗೃಹಿಣಿ, ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net