

ಉಡುಪಿ: ತುಳು ಭಾಷೆಯ ಉಳಿವಿಗಾಗಿ ನಾಟಕ ರಂಗದ ಕೊಡುಗೆ ಬಹಳಷ್ಟಿದೆ. ನಾಟಕ ಮತ್ತು ಸಿನೆಮಾಗಳಿಂದ ತುಳು ಭಾಷೆಯ ಪ್ರಚಾರ ವ್ಯಾಪ್ತಿಯೂ ವಿಸ್ತಾರವಾಗಿದೆ. ಜನರಲ್ಲಿ ಭಾಷಾ ಅಭಿರುಚಿ ಬೆಳೆಸುವಲ್ಲಿ ನಾಟಕಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ತುಳು ಕೂಟ ಉಡುಪಿ ವತಿಯಿಂದ ಆಯೋಜಿಸಿರುವ 23ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕರಾವಳಿಯಲ್ಲಿ 1932ರಿಂದ ತುಳು ನಾಟಕ ಪ್ರದರ್ಶನ ಪ್ರಾರಂಭ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರು 1946ರಲ್ಲಿ ಮೊದಲ ವೃತ್ತಿಪರ ತುಳು ನಾಟಕ ತಂಡವನ್ನು ಕಟ್ಟಿದ್ದರು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪಾತ್ರಧಾರಿಗಳಿದ್ದರು ಎಂಬುದು ವಿಶೇಷ. ಇದು ಅವರ ಸಂಟನಾತ್ಮಕ ಶಕ್ತಿಯ ದ್ಯೋತಕ. 1972ರಲ್ಲಿ ತುಳು ಸಿನೆಮಾ ಯುಗ ಪ್ರಾರಂಭವಾಗಿದ್ದು, ಇದರಲ್ಲೂ ಕೆಮ್ತೂರು ಯೋಗದಾನ ದೊಡ್ಡದಿದೆ ಎಂದರು.
ತುಳು ಕೂಟ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹರಿಪ್ರಸಾದ್ ರೈ , ಅಖಿಲ ಭಾರತ ತುಳು ಒಕ್ಕೂಟ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪು, ಎಂಜಿಎಂ ಕಾಲೇಜು ಪ್ರಾಚಾರ್ಯ ಪ್ರೊ. ಲಕ್ಷಿ ನಾರಾಯಣ ಕಾರಂತ್, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಹಿರಿಯ ಕಲಾವಿದ ಡಾ. ಭಾಸ್ಕರಾನಂದ ಕುಮಾರ್, ಉದ್ಯಾವರ ನಾಗೇಶ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ರಶ್ಮಿ ಶೆಣೈ, ಚೈತನ್ಯ ಎಂ,ಜಿ. ಉಪಸ್ಥಿತರಿದ್ದರು. ದಿವಾಕರ ಸನಿಲ್ ಸ್ವಾಗತಿಸಿ, ಪ್ರಭಾಕರ ಭಂಡಾರಿ ಪ್ರಸ್ತಾವನೆಗೈದರು. ಗಂಗಾಧರ ಕಿದಿಯೂರು ವಂದಿಸಿದರು. ಡಾ. ವಿ.ಕೆ. ಯಾದವ್ ಕಾರ್ಯಕ್ರಮ ನಿರೂಪಿಸಿದರು.