

ಶೃಂಗೇರಿ: ತಾಲೂಕು ಜಾನಪದ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ.21ರಂದು ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಆಧ್ಯಾತ್ಮಿಕ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ನಿಯೋಜಿತ ಅಧ್ಯಕ್ಷ ಆಶಿಶ್ ದೇವಾಡಿಗ ಹೇಳಿದರು.
ಗುರುವಾರ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ವಹಿಸಲಿದ್ದಾರೆ. ಕಜಾಪ ಅಧ್ಯಕ್ಷ ಡಾ. ಜಾನಪದ ಎಸ್. ಬಾಲಜಿ ಸಮಾರಂಭ ಉದ್ಘಾಟಿಸಲಿದ್ದು, ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಜನಪದ-ಜನರಪದ ಎಂಬ ವಿಷಯದ ಬಗ್ಗೆ ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಸಹ ಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್ ಮಾತನಾಡಿ, ನಿಯೋಜಿತ ಅಧ್ಯಕ್ಷ ಆಶೀಶ್ ದೇವಾಡಿಗ ಪದವಿ ಸ್ವೀಕರಿಸಲಿದ್ದು, ಜಾನಪದ ಕಲಾವಿದರನ್ನು ಜಿಲ್ಲಾ ಕಜಾಪ ಮಾಜಿ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಸನ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ತಾಲೂಕು ಕಜಾಪ ಪದಾಧಿಕಾರಿಗಳಾದ ಮೋಹನ್ ಬೋಳೂರು, ಶಶಾಂಕ್ ಗೋಚವಳ್ಳಿ, ಶೂನ್ಯ ರಮೇಶ್, ರೇವಂತ್, ರಜಿತ್ ಇತರರಿದ್ದರು.