

ಬಸವಕಲ್ಯಾಣ: ಜ್ಞಾನ ಜಗತ್ತನ್ನು ಆಳುತ್ತದೆ, ಜ್ಞಾನಕ್ಕೆ ಸಮನಾದುದು ಇನ್ನೊಂದಿಲ್ಲ, ಜ್ಞಾನ ಬಲವೇ ಎಲ್ಲ ಸಾಮರ್ಥ್ಯಗಳಿಗೆ ಸಂಜೀವಿನಿ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಸೈದಾಪುರ ಗ್ರಾಮದಲ್ಲಿ ಶ್ರೀ ಹನುಮಾನ ಮಂದಿರ ಕಳಸಾರೋಹಣ ನಿಮಿತ್ತ ಸೋಮವಾರ ಸಂಜೆ ಆಯೋಜಿಸಿದ್ದ ಅಖಂಡ ಹರಿನಾಮ, ಜ್ಞಾನೇಶ್ವರಿ ಪಾರಾಯಣ ಸಪ್ತಾಹದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಈ ದೇಶದ ಪರಂಪರೆಯಲ್ಲಿ ಕಿರು ವಯಸ್ಸಿನಲ್ಲಿಯೇ ಅಗಾಧ ಅಧ್ಯಾತ್ಮ ಸಾಧನೆ ಮಾಡಿದ ಸಂತ ಜ್ಞಾನೇಶ್ವರ ಮಹಾರಾಜರು, ವ್ಯಕ್ತಿ ಜ್ಞಾನದಿಂದ ದೊಡ್ಡವನಾಗುತ್ತಾನೆ ಹೊರತು ವಯಸ್ಸಿನಿಂದಲ್ಲ ಎಂಬುದನ್ನು ಸಾಕ್ಷಿ ಕರಿಸಿದವರು ಎಂದು ಹೇಳಿದರು.
ಮನುಷ್ಯ ಸಂಸಾರಿಕ ಕಕ್ಷೆಯಿಂದ ದೈವಿಕಕ್ಷೆಗೆ ಪಯಣಿಸಬೇಕಾದರೆ ಸದ್ಗುರುವಿನ ಆಶೀರ್ವಾದ ಬಲ ಅತ್ಯಗತ್ಯ. ಅಂತರ್ಮುಖಿ ಯಾನದಿಂದ ದೈವಿ ಸನ್ನಿಧಾನ ಸಾಧ್ಯವಾಗುತ್ತದೆ. ಸಂತ ಜ್ಞಾನೇಶ್ವರಿ ಪಾರಾಯಣ ಸೈದಾಪುರ ಜನತೆಯಲ್ಲಿ ಅಧ್ಯಾತ್ಮದ ಹೊಸ ಬೆಳಕು ಮೂಡಿಸಲಿ, ಸರ್ವರೂ ಸಹ ಬಾಳ್ವೆಯಿಂದ ಬದುಕುವಂತಾಗಲಿ ಎಂದು ಶುಭ ಹಾರೈಸಿದರು.
ಕೋಹಿನೂರಿನ ಅಂಬಾರಾಯ ಉಗಾಜಿ ಮಾತನಾಡಿ ತ್ಯಾಗ, ಸೇವೆ, ದಾಸೋಹ, ಸಮಾಜಮುಖಿ ಕಾರ್ಯ ಚಟುವಟಿಕೆಗಳೇ ಹಾರಕೂಡ ಶ್ರೀಮಠದ ವಿಶೇಷ ಹಾಗೂ ವೈಶಿಷ್ಟ್ಯತೆ ಎಂದರು.
ಶ್ರೀ ವಿಷ್ಣು ಮಹರಾಜ ಔರಾದ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಅಮರನಾಥ ಮಹಾರಾಜ ಬಾಮನಿಕರ, ಸಂಜಯ ಮಹಾರಾಜ ಗುರಾಕಾರ, ಪ್ರಸಾದ ಮಹಾರಾಜ ಕೌಂಟಾ ಇತರರಿದ್ದರು.
ಅಂಬರಾಯ ಬೊಂಬ್ಳೆ ನಿರೂಪಣೆ ಮಾಡಿದರು. ದಗಡು ಬಿರಾದಾರ ವಂದಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ಹಾರಕೂಡ ಶ್ರೀಗಳನ್ನು ದೀಪಾಲಂಕೃತ ಸಾರೋಟಿನಲ್ಲಿ ಗ್ರಾಮದ ಹೊರವಲಯದಿಂದ ಶ್ರೀ ಹನುಮಾನ ಮಂದಿರದವರೆಗೆ ಅದ್ದೂರಿ ಮೆರವಣಿಗೆ ಮೂಲಕ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು. ಭಕ್ತರಿಂದ ಹಾರಕೂಡ ಶ್ರೀಗಳ ೬೩೬ನೇ ತುಲಾಭಾರ ಕಾರ್ಯಕ್ರಮ ಜರುಗಿತು.