

ಬೇಲೂರು : ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ನವದೆಹಲಿಯ ಉಸ್ತಾದ್ ಬುಸ್ಮಿಲ್ಲಾ ಖಾನ್ ಯುವ ಪುರಸ್ಕಾರ-2022ಕ್ಕೆ ಪುರಸ್ಕೃತರಾದ ಬೇಲೂರಿನ ನಾಟಕಕಾರ, ನಟ, ನಿರ್ದೇಶಕ, ಕವಿ, ಲೇಖಕ ಡಾ.ಬೇಲೂರು ರಘುನಂದನ್ ಅವರ ಸಾಧನೆ ಬೇಲೂರಿಗೆ ಕೀರ್ತಿಯ ಕಳಸ ಪ್ರಾಯವಾಗಿದೆ. ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಶ್ರೀಚನ್ನಕೆಶವಸ್ವಾಮಿ ದಾಸೋಹ ಭವನದಲ್ಲಿ ಡಾ.ಬೇಲೂರು ರಘುನಂದನ್ ಅಭಿನಂದನಾ ಸಮಿತಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಡಾ.ಬೇಲೂರು ರಘುನಂದನ್ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರೆ ಅವರ ಸಾಧನೆ ಕಾರಣ. ಡಾ.ಬೇಲೂರು ರಘುನಂದನ್ ಅವರು ಬೇಲೂರಿನ ಕೀರ್ತಿ ಪತಾಕೆಯನ್ನು ರಾಷ್ಟ್ರದೆಲ್ಲೆಡೆ ಪಸರಿಸಿರುವುದು ಹೆಮ್ಮೆಯ ಸಂಗತಿ. ಬೇಲೂರು ಹೇಗೆ ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿ ಖ್ಯಾತಿ ಪಡೆದಿದೆಯೋ ಹಾಗೆ ರಘುನಂದನ್ ಸಹ ಅವರು ಸಾಗುತ್ತಿರುವ ಕ್ಷೇತ್ರದಲ್ಲಿ ವಿಶ್ವದೆತ್ತರಕ್ಕೆ ಬೆಳೆಯಲಿ ಎಂದರು ಹಾರೈಸಿದರು.
ಸಾಹಿತಿ ಚಲಂ ಹಾಡ್ಲಹಳ್ಳಿ ಮಾತನಾಡಿ, ನಾಟಕಕಾರ, ನಟ, ನಿರ್ದೇಶಕ, ಕವಿ, ಲೇಖಕ ಡಾ.ಬೇಲೂರು ರಘುನಂದನ್, ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ರೀತಿ ಕೆಲಸ ಮಾಡುವವರು ಬಹಳ ವಿರಳ. ಆದರ್ಶ ಮತ್ತು ವಾದಗಳನ್ನಿಟ್ಟುಕೊಂಡು ನಾಟಕ, ಸಾಹಿತ್ಯ ರಚನೆ ಮಾಡಬಾರದ ಎಂದರೆ ಖಂಡಿತವಾಗಿಯೂ ಬೇಕು. ಇಂದು ಅಂಬೇಡ್ಕರ್‌ವಾದ, ಗಾಂವಾದ, ಲೋಹಿಯ ವಾದ ಸೇರಿ ಯಾವುದೇ ವಾದವಿದ್ದರೂ ಅವುಗಳನ್ನೆಲ್ಲ ರಂಗಭೂಮಿಯಲ್ಲಿ ಮೈಗೂಡಿಸಿ ಕೊಂಡು, ಇಂದಿನ ಬದುಕಿಗೆ ವಾದ ಮತ್ತು ಆದರ್ಶಗಳೊಂದಿಗೆ ಜನ ಸಾಮಾನ್ಯರಿಗೆ ಏನು ಬೇಕು ಎಂಬುದನ್ನು ಕೊಟ್ಟಿದ್ದಾರೆ ಎಂದರು.
ರಾಜ್ಯದಲ್ಲೆ ನಾಟಕದ ವಿಚಾರಕ್ಕೆ ಬಂದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನಿರ್ಲಕ್ಷಕ್ಕೊಳಗಾದ ಸಮುದಾಯದ ಬಗ್ಗೆ ಮಾತನಾಡುವ ಏಕೈಕ ಲೇಖಕರು ಇವರು. ಇವರ ಯಾವುದೇ ನಾಟಕ ನೊಡಿದರೂ ಅದರಲ್ಲಿ ಸಂಚಲನ ಉಂಟು ಮಾಡಿದ್ದಾರೆ. ಜತೆಗೆ ತೃತೀಯ ಲಿಂಗಿಯ ವಿಷಯದ ಮೇಲೆ ನಾಟಕ ಕಟ್ಟುವುದು ದೊಡ್ಡ ಸಾಧನೆ. ಆದರೆ ಡಾ.ಬೇಲೂರು ರಘುನಂದನ್ ಅವರನ್ನು ಗುರುತಿಸುವಲ್ಲಿ ಹಾಸನ-ಬೇಲೂರಿನವರಿಗೆ ಇನ್ನೂ ಸಾಧ್ಯವಾಗಿಲ್ಲ. ಇಂತಹ ಪ್ರತಿಭೆಯನ್ನು ನಿರ್ಲಕ್ಷಿಸುತ್ತಿರುವುದು ಜಿಲ್ಲೆಗೆ ಶಾಪವಾಗಿದೆ. ಸಂಸ್ಕೃತಿಕ ವಲಯದಲ್ಲೂ ಸಾಂಸ್ಕೃತಿಕ ರಾಜಕಾರಣ ಇರುವುದರಿಂದ ಸಾಕಷ್ಟು ಪ್ರತಿಭೆಗಳು ಪ್ರೋತ್ಸಾಹ ಸಿಗದೆ ಕಮರಿ ಹೋಗುತ್ತಿವೆ. ಇದು ನಿಲ್ಲಬೇಕೆಂದರೆ ಇಂತವರ ಪ್ರತಿಭೆಯನ್ನು ಸಾಮಾಜಿಕ ನ್ಯಾಯದಡಿ ಗುರುತಿಸುವ ಕೆಲಸವಾಗಬೇಕಿದೆ ಎಂದರು.
ಡಾ.ಬೇಲೂರು ರಘುನಂದನ್ ಅಭಿನಂದನಾ ಸಮಿತಿ ಹಾಗೂ ತಾಲೂಕು ಕಸಾಪದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಟಕಕಾರ, ನಟ, ನಿರ್ದೇಶಕ, ಕವಿ, ಲೇಖಕ ಡಾ.ಬೇಲೂರು ರಘುನಂದನ್, ಕೂಡೋಣ, ಕಟ್ಟೋಣ ಬೇಲೂರಿನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ತಿಳಿಸೋಣ. ಬೇಲೂರಿನಲ್ಲಿ ಕಲೆ ಸಾಹಿತ್ಯ, ಸಂಸ್ಕೃತಿ ಕಟ್ಟುವ ಕೆಲಸವನ್ನು ಮಾಡೋಣ. ನನ್ನನ್ನು ಯಾವಾಗ ಬೇಕಾದರೂ ಕರೆದರೂ ಬರುತ್ತೇನೆ. ದೇಶದ ತುಂಬ ಓಡಾಡಲು ನನಗೆ ಬೇಲೂರೇ ಸ್ಪೂರ್ತಿ. ನಾನು ಇಂದು ಎತ್ತರಕ್ಕೆ ಬೆಳೆಯಲು ಬೇಲೂರು ಕಾರಣವಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿ ಇರುವವರನ್ನು ಕೊಟ್ಟರೆ ಅವರನ್ನು ಬೆಳೆಸುವ ಕೆಲಸ ಮಾಡುತ್ತೇನೆ. ನಾನೋಬ್ಬ ಬೆಳೆದರೆ ಸಾಲದು, ನನ್ನೂರಿನವರು ಬೆಳೆಯಬೇಕು. ಸಾಂಸ್ಕೃತಿಕವಾಗಿ ಬೇಲೂರು-ಹಾಸನವನ್ನು ಕಟ್ಟೋಣ. ಈ ಮೂಲಕ ಕಲೆ ಸಾಹಿತ್ಯ ಸಮಸ್ಕೃತಿ ಉಳಿಸಿ ಬೆಳೆಸುವುದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಡಾ.ಬೇಲೂರು ರಘುನಂದನ್ ಅಭಿನಂದನಾ ಸಮಿತಿ ಅಧ್ಯಕ್ಷ ಸಿ.ಎನ್.ದಾನಿ, ಕಸಾಪ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ, ಮಾಜಿ ಅಧ್ಯಕ್ಷ ರಾಜೇಗೌಡ, ತಮ್ಮಣ್ಣಗೌಡ, ಸಾಹಿತಿ, ಪ್ರಕಾಶಕ ನಾಗರಾಜ್ ಹಾಡ್ಲಹಳ್ಳಿ, ಸಾಹಿತಿಗಳಾದ ದಯಾ ಗಂಗನಘಟ್ಟ, ಇಂದಿರಮ್ಮ, ಪಲ್ಲವಿ, ಕಸಾಪದ ಮಹೇಶ್, ಮಾ.ಶಿವಮೂರ್ತಿ, ಸುಲೈಮಾನ್, ಸೇರಿದಂತೆ ಇತರರಿದ್ದರು.