ನೀರಾವರಿಗೆ 1,200 ಕೋಟಿ ರೂ ಯೋಜನೆ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

Inauguration of Indira Gandhi residential school building Mandya
Published on

ಮಂಡ್ಯ: ತಾಲೂಕಿನ ಬಸರಾಳು ಹಾಗೂ ನಾಗಮಂಗಲ ತಾಲೂಕಿನ ದೇವಲಾಪುರ, ಹೊಣಕೆರೆ ಭಾಗದಲ್ಲಿ ನೀರಾವರಿ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ 1,200 ಕೋಟಿ ರೂ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ಬಸರಾಳು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಆಯೋಜಿಸಿದ್ದ 16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾಗಾಂಧಿ ವಸತಿ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸರಾಳು ಮತ್ತು ದೇವಲಾಪುರ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಿಂದ ಕಾವೇರಿ ನೀರನ್ನು ತರಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಡಿಪಿಆರ್ ಕೂಡ ಆಗಿದೆ. ಇನ್ನೊಂದು ವರ್ಷದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಹೇಳಿದರು.

ಇಂದಿರಾಗಾಂಧಿ ಅವರ ಹೆಸರಿನಲ್ಲಿ ಸರ್ಕಾರಿ ವಸತಿ ಶಾಲೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿತ್ತು. ಅದರಂತೆ ಈಗಾಗಲೇ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಿವೆ. ಆದರೂ, ಸರ್ಕಾರದ ವಸತಿ ಶಾಲೆಗಳಿಗೆ ದಾಖಲಾತಿ ಪಡೆಯಲು ಹೆಚ್ಚಿನ ಪೈಪೋಟಿ ಇದೆ. ಹಾಸ್ಟೆಲ್‌ನಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಜತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ರ‌್ಯಾಂಕ್ ಪಡೆಯುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ವಿವರಿಸಿದರು.

ಮಂಡ್ಯ ವಿಧಾನ ಸಭಾ ವ್ಯಾಪ್ತಿಯ ಬಸರಾಳು, ತಂಗಳಗೆರೆ, ತುಂಬಕೆರೆ ವಸತಿ ಶಾಲೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿ ನೀಡಲಾಗುತ್ತಿದೆ. ಇದು ಶಿಕ್ಷಣ ಇಲಾಖೆಯ ನಿಯಮವೂ ಆಗಿದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕರಿಂದ ಶಿಾರಸು ಪತ್ರ ಅಥವಾ ದೂರವಾಣಿ ಕರೆ ಮಾಡಿಸಿದರೆ ದಾಖಲಾತಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಯಾರೂ ಅನ್ಯತಾ ಭಾವಿಸಿದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಹೆಚ್ಚು ಅಂಕ ಪಡೆಯುವಂತೆ ಪ್ರೇರೇಪಿಸಿ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ. ಖಾಸಗಿ ಶಾಲೆಗಳ ವ್ಯಾಮೋಹವನ್ನು ಕೈಬಿಡಿ ಎಂದು ಪಾಲಕರಿಗೆ ಸಲಹೆ ನೀಡಿದರು.

ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹಮದ್ ಅವರೂ ಸಹ ಮಂಡ್ಯ ತಾಲೂಕಿನ ಮಕ್ಕಳಿಗೆ ಇನ್ನೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅಬ್ದುಲ್ ಕಲಾಂ ವಸತಿ ಶಾಲೆಯನ್ನು ಮಂಜೂರು ಮಾಡಿದ್ದಾರೆ. ಮಂಡ್ಯ ನಗರದಲ್ಲಿ ಪ್ರಾರಂಭವಾಗಿದೆ. ಬಿ.ಹೊಸೂರು ಗ್ರಾಮದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗೆ ಶಂಕುಸ್ಥಾಪನೆ ಮಾಡಿ ಉದ್ಘಾಟಿಸಲಾಗುವುದು. ಈಗಾಗಲೇ ಬಸರಾಳು ಸುತ್ತಮುತ್ತಲ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಒಟ್ಟಾರೆ 100 ಕೋಟಿ ರೂ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ಎಲ್ಲ ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಬಿ.ಹೊಸೂರು ಗ್ರಾಮದಲ್ಲಿ ಶಾಲೆಗೆ ಹೋಗುವ ರಸ್ತೆ ಸರಿಯಿಲ್ಲದ ಕಾರಣ ಸಮಸ್ಯೆಯಾಗಿರುವುದನ್ನು ನೋಡಿದ್ದೇನೆ. ಅದನ್ನೂ ಸಹ ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳು ಮುಖ್ಯ ರಸ್ತೆಯಿಂದ ಶಾಲೆಗೆ ಹೋಗುವ ರಸ್ತೆಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಶ್ರೀನಿವಾಸ್, ಸಹಾಯಕ ನಿರ್ದೇಶಕಿ ಕಾವ್ಯಶ್ರೀ, ತಾ.ಪಂ ಮಾಜಿ ಸದಸ್ಯ ಮಂಜೇಶ್‌ಗೌಡ, ಬಸರಾಳು ಗ್ರಾ.ಪಂ ಅಧ್ಯಕ್ಷ ಜವರಯ್ಯ, ಸದಸ್ಯರಾದ ರಾಜು, ಶಾಂತಮ್ಮ, ಪದ್ಮಾ, ಪ್ರದೀಪ್, ಇಂದಿರಾಗಾಂಧಿ ವಸತಿ ಶಾಲೆ ಪ್ರಾಂಶುಪಾಲ ಆರ್.ಪ್ರಭಾಕರ್, ಮುಖಂಡರಾದ ನಾಗೇಶ್, ಶಂಕರೇಗೌಡ, ಕೃಷ್ಣೇಗೌಡ, ದ್ಯಾಪಸಂದ್ರ ಉಮೇಶ್ ಇತರರಿದ್ದರು.

ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಬಸರಾಳು ಸಮೀಪದ ಕೋಡಿಕೊಪ್ಪಲು ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಮತ್ತು ಪುಸ್ತಕವನ್ನು ರವಿಕುಮಾರ್ ಗಣಿಗ ವಿತರಿಸಿದರು. ನಂತರ ಮಾತನಾಡಿ ಸಮಾಜ ಸೇವಕ ನಾಗೇಶ್ ಅವರು ತಾವು ಓದಿದ ಶಾಲೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಮವಸ್ತ್ರ ಮತ್ತು ಪುಸ್ತಕಗಳನ್ನ ಮಕ್ಕಳಿಗೆ ನೀಡುತ್ತಿರುವುದು ಮೆಚ್ಚುವಂಥದ್ದು. ತಮ್ಮ ಸಂಪಾದನೆಯ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ನೀಡುತ್ತಿದ್ದು, ಎಲ್ಲ ಗ್ರಾಮಗಳಲ್ಲೂ ಇಂತಹ ಸಮಾಜ ಸೇವಕರು ಸರ್ಕಾರಿ ಶಾಲೆ ಉನ್ನತಿಕರಣಕ್ಕೆ ಸಹಕರಿಸಲಿ ಎಂದು ಮನವಿ ಮಾಡಿದರು.

ಸಮಾಜ ಸೇವಕ ನಾಗೇಶ್, ಮುಖಂಡರಾದ ಮಂಜೇಗೌಡ, ಶಂಕರೇಗೌಡ, ಜವರಯ್ಯ, ಪ್ರದೀಪ್, ಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net