

ಮೂಡುಬಿದಿರೆ: ಅಸಂಘಟಿತ ಕಾರ್ಮಿಕರು, ಬಡವರು ಹಸಿವಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನನ್ನು ಆರಂಭಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೂಡುಬಿದಿರೆ ಆಡಳಿತ ಸೌಧದ ಎದುರು ಬುಧವಾರ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿ ಮಾತನಾಡಿದರು.
ಅಗ್ಗದ ದರದಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಸಿಗುತ್ತದೆ. ಬಡವರ ಹಸಿವು ನೀಗಿಸುವ ಇಂತಹ ಉತ್ತಮ ಸೌಲಭ್ಯ ದೇಶದ ಬೇರೆ ಯಾವ ರಾಜ್ಯಗಳಲ್ಲೂ ಇಲ್ಲ. ಬಡವರ ಭದ್ರತೆಗಾಗಿ ಇಂದಿರಾಗಾಂಧಿ ಪಡಿತರ ವ್ಯವಸ್ಥೆ, ಪಿಂಚಣಿ ವ್ಯವಸ್ಥೆ, ನಿವೇಶನ ರಹಿತರಿಗೆ ಭೂಮಿ ನೀಡಿದ್ದರು. ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ಸರ್ಕಾದ ಯೋಜನೆಗಳು ಜನರಿಗೆ ನೇರವಾಗಿ ಸಿಗಬೇಕೆಂಬುದು ಎಲ್ಲರ ಉದ್ದೇಶವಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಎಡಿಸಿ ಸಂತೋಷ್ ಕುಮಾರ್, ತಹಸೀಲ್ದಾರ್ ಶ್ರೀಧರ್ ಎಸ್.ಮುಂದಲಮನೆ, ತಾಪಂ ಇಒ ಕುಸುಮಾಧರ, ಮುಖ್ಯಾಧಿಕಾರಿ ಇಂದು ಎಂ., ಕಂದಾಯ ಅಧಿಕಾರಿ ಜ್ಯೋತಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ, ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಸಿವು ಮುಕ್ತ ಕರ್ನಾಟಕ’ ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ ಈ ಯೋಜನೆಗೆ ಹಿನ್ನಡೆ ಆಗಿತ್ತು. ಮಂಜುನಾಥ ಭಂಡಾರಿ, ಸದಸ್ಯ, ವಿಧಾನ ಪರಿಷತ್