

ಬೂದಿಕೋಟೆ: ಸಮಾಜ ಕಲ್ಯಾಣ ಇಲಾಖೆಯಿಂದ 1.90 ಕೋಟಿ ವೆಚ್ಚದಲ್ಲಿ ಬೂದಿಕೋಟೆಯಲ್ಲಿ ನಿರ್ಮಾಣ ಮಾಡಿದ್ದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯವನ್ನು ಶನಿವಾರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಂಸದ ಎಂ.ಮಲ್ಲೇಶ್ಬಾಬು ಮತ್ತು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಉದ್ಘಾಟಿಸಿದರು.
ನೂತನವಾಗಿ ನಿರ್ಮಿಸಿದ್ದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಹಲವು ಕಾರಣಗಳಿಂದ ತಡೆ ಒಡ್ಡಿ, ಲೋಕಾರ್ಪಣೆ ಮಾಡದ ಕಾರಣ ಹಾಸ್ಟೆಲ್ನಲ್ಲಿ ಸುಮಾರು 33 ವಿದ್ಯಾರ್ಥಿಗಳು ವಾಸಿಸಲು ಯೋಗ್ಯವಲ್ಲದ ರೇಷ್ಮೆ ಸಾಕಣೆ ಮನೆಯಲ್ಲಿ 2 ವರ್ಷಗಳಿಂದ ದಿನ ತಳ್ಳುತ್ತಿದ್ದರು. ಈ ಬಗ್ಗೆ ಜು.9ರಂದು ವಿಜಯವಾಣಿ "ವಸತಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ' ಎಂಬ ಶೀರ್ಷಿಕೆಯಡಿ ವಿಸತ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಆಡಳಿತ ವಿದ್ಯಾರ್ಥಿಗಳ ಹೊಸ ಹಾಸ್ಟೆಲ್ ಉದ್ಘಾಟಿಸಿ
ವಿದ್ಯಾರ್ಥಿಗಳು ಪ್ರವೇಶಿಸುವಂತೆ ಮಾಡಿದ್ದಾರೆ.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿನಿಲಯ ಪ್ರಾರಂಭಿಸಲಾಗಿದ್ದು, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಮಕ್ಕಳಿಗೆ ಪ್ರಾಮಾಣಿಕವಾಗಿ ನೀಡಬೇಕು ಎಂದರು.
ಸಂಸದ ಮಲ್ಲೇಶ್ಬಾಬು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿನಿಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಬಂಗಾರಪೇಟೆ, ಬೂದಿಕೋಟೆ ಮಾರ್ಗದ ರಸ್ತೆ ಹದಗೆಟ್ಟಿದ್ದು, ಈ ಮಾರ್ಗದ ರಸ್ತೆಯು ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಸಂಸದರ ಅನುದಾನದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಈ ರಸ್ತೆಯನ್ನು ಶಾಸಕರೇ ಅನುದಾನದಲ್ಲಿ ಅಭಿವೃದ್ಧಿ ಪಡಿಸಬೇಕು. ಕೇಂದ್ರ ಸರ್ಕಾರದಿಂದ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡುವ ಜತೆಗೆ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಭರವಸೆ ನೀಡಿದರು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್ ಮಂಜುನಾಥ, ರಾಮಪ್ಪ, ಮುಖಂಡರಾದ ಮಾರ್ಕಂಡೇಗೌಡ, ಬಿ.ರಮೇಶ್, ಆರ್.ವಿಜಯಕುಮಾರ್, ಚಂದ್ರಶೇಖರ್, ಎ.ಬಾಬು, ಮಹದೇವ್, ಮುನಿಸ್ವಾಮಿಶೆಟ್ಟಿ, ಬಾಲಚಂದ್ರ, ನರೇಶ್, ಮುರುಗನ್, ಎಚ್.ಕೆ ನಾರಾಯಣಸ್ವಾಮಿ ಹಾಜರಿದ್ದರು.
ಪ್ರತಿ ಪಕ್ಷಗಳಿಂದ ಸುಳ್ಳು ಆರೋಪ
ಎಸ್ಸಿ ಮತ್ತು ಎಸ್ಟಿ ಹಣ ದುರ್ಬಳಕೆ ಆಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ದಲಿತರ ಮೇಲೆ ಅಪಾರ ಗೌರವವನ್ನು ಸರ್ಕಾರ ಹೊಂದಿದ್ದು, ದಲಿತ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪಣತೊಟ್ಟಿದೆ. ಸರ್ಕಾರವು ಜಾರಿಗೊಳಿಸಿರುವ ಐದು ಗ್ಯಾರಂಟಿಗಳನ್ನು ಜಾತ್ಯತಿತವಾಗಿ ಎಲ್ಲ ಸಮುದಾಯದವರಿಗೂ ನೀಡಲಾಗುತ್ತಿದೆ. ಆದರೆ ಪ್ರತಿ ಪಕ್ಷದವರು ರಾಜಕೀಯಗೊಳಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಹೋಬಳಿಗೊಂದು ವಸತಿ ಶಾಲೆ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಹೋಬಳಿಗೊಂದು ವಸತಿ ಶಾಲೆ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈಗಾಗಲೇ ಯಳೇಸಂದ್ರ ಮತ್ತು ದೊಡ್ಡಪೊನ್ನಾಂಡಹಳ್ಳಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆರಂಭಿಸಲಾಗಿದೆ. ತೊಪ್ಪನಹಳ್ಳಿಯಲ್ಲಿ 4.30 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಿಸಲಾಗುತ್ತಿದೆ. ಜತೆಗೆ ಬಂಗಾರಪೇಟೆಯ ಸೇಠ್ ಕಾಂಪೌಂಡ್ನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಹಾಸ್ಟೆಲ್ ಕಾಮಗಾರಿ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಹಣ ಈಗ 320 ರೂ.ಗೆ ಏರಿಕೆ ಮಾಡಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಅಧಿಕಾರಿಗಳ ವಿರುದ್ಧ ಗರಂ
ಕಾರ್ಯಕ್ರಮಕ್ಕೆ ಸಂಸದರು ಬರುವುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಅವರು ಬರುವ ಮಾಹಿತಿ ಮುಂಚೆಯೇ ಗೊತ್ತಿದ್ದರೆ ಕಾರ್ಯಕ್ರಮವನ್ನು ಸ್ವಲ್ಪ ತಡವಾಗಿ ಆರಂಭಿಸಬಹುದಿತ್ತು. ಜತೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ರ್ನಿಲಕ್ಷ$್ಯದಿಂದ ಕಾರ್ಯಕ್ರಮದ ಬ್ಯಾನರ್ ಅಳವಡಿಸಿಲ್ಲ ಹಾಗೂ ಆಸನಗಳ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಎಂದು ಶಾಸಕರು ಗರಂ ಆದರು.