

ಮೈಸೂರು: ರೈತರ ಶ್ರಮದ ಬೆವರಿನಿಂದ ನಡೆಯುತ್ತಿರುವ ಹಾಪ್‌ಕಾಮ್ಸ್ ಮತ್ತು ನಂದಿನಿ ಆರೋಗ್ಯದ ಎರಡು ಕಣ್ಣುಗಳಂತಿದ್ದು, ರಾಜ್ಯದ ಆಸ್ಪತ್ರೆ ಮತ್ತು ಕಾಲೇಜು ಆವರಣಗಳಲ್ಲಿ ಹಾಪ್‌ಕಾಮ್ಸ್ ಮತ್ತು ನಂದಿನಿ ಪಾರ್ಲರ್‌ಗಳನ್ನು ತೆರೆಯಬೇಕು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಎಂದು ಹೇಳಿದರು.
ನಗರದ ಜಯದೇವ ಆಸ್ಪತ್ರೆ ಆವರಣದಲ್ಲಿ ಬುಧವಾರ ಹಾಪ್‌ಕಾಮ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ವಾಯುಮಾಲಿ ನ್ಯದಿಂದ ಕಳೆದ ವರ್ಷ 22 ಲಕ್ಷ ಜನರು ಮೃತಪಟ್ಟಿದ್ದು, ವಾಯು ಮಾಲಿತ್ಯ ತಡೆಗಟ್ಟಲು ಪ್ರತಿಯೊಬ್ಬರು ಶ್ರಮಿಸಬೇಕು. ಅದೇ ರೀತಿರಾಸಾಯನಿಕ ಹಾಗೂ ಕೀಟನಾಶ ಬಳಕೆಯಿಂದ ಭೂಮಿಯ ಆರೋಗ್ಯವೂ ಹದಗೆಡುತ್ತಿದ್ದು, ಇದರ ನೇರ ಪರಿಣಾಮ ಜನರ ಮೇಲೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಶದ ಕೆಲವು ಭಾಗದಲ್ಲಿ ಮಾಂಸದ ಮೇಲಿರುವ ಹೆಚ್ಚು ಪ್ರೀತಿ, ಹಣ್ಣು ತರಕಾರಿಗಳ ಮೇಲೆ ಇಲ್ಲವಾಗಿದೆ. ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ಶೇ.12 ಜನರು ಮಾತ್ರ ತರಕಾರಿ ಹಣ್ಣುಗಳನ್ನು ಸೇವಿಸುತ್ತಿದ್ದು, ಈ ಸಂಖ್ಯೆ ಹೆಚ್ಚಾಗಬೇಕು. ದೇಶದಲ್ಲಿ ಶೇ.70 ಜನರಲ್ಲಿ ವಿಟಮಿನ್ ಡಿ ಕೊರತೆ ಇದೆ. ಗ್ರಾಮೀಣ ಭಾಗದ ಶೇ.50 ಜನರಲ್ಲಿ ರಕ್ತಹೀನತೆ ಇದೆ. ಕಡಿಮೆ ಪಾಲೀಶ್ ಮಾಡಿರುವ ಅಕ್ಕಿ ತಿಂದರೆ ಅದರಲ್ಲಿ ವಿಟಿಮಿನ್ ಇರುತ್ತದೆ ಎಂದರು.
ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಮೈಸೂರಿಗೆ ಸಾಂಸ್ಕೃತಿಕವಾಗಿ ಅರಮನೆ ಎಷ್ಟು ಪ್ರಾಮುಖ್ಯವೋ ಜಯದೇವ ಆಸ್ಪತ್ರೆ ಕೂಡ ಜನರ ಆರೋಗ್ಯಕ್ಕೆ ಮುಖ್ಯವಾಗಿದೆ. ಮಂಜುನಾಥ್ ಅವರು ಈ ಆಸ್ಪತ್ರೆಯನ್ನು ಅದ್ಭುತವಾಗಿ ನಿರ್ಮಾಣ ಮಾಡಿ ಜನರಿಗೆ ಅನುಕೂಲಮಾಡಿ ಕೊಟ್ಟಿದ್ದಾರೆ ಎಂದರು.
ಸಮಾರಂಭದಲ್ಲಿ ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕೆ.ಎಸ್. ಸದಾನಂದ, ಡಾ. ಶಂಕರ್‌ಶಿರಾ, ಹಾಪ್‌ಕಾಮ್ಸ್‌ನ ಜಿಲ್ಲಾ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಉಪಾಧ್ಯಕ್ಷರಾದ ಸರ್ವೇಶ್, ಸೂರ್ಯಕುಮಾರ್, ನಿರ್ದೇಶಕರಾದ ಬೋರೇಗೌಡ, ಹೊಸಹುಂಡಿ ರಘು, ಮಹಾದೇವ, ಶ್ರೀನಿವಾಸ, ಚಂದ್ರೇಗೌಡ, ರಾಮೇಗೌಡ, ಪದ್ಮನಾಭ, ಸುಜಾತಾ, ನಳಿನಿ, ವ್ಯವಸ್ಥಾಪಕ ನಿರ್ದೇಶಕ ಚೇತನ್, ಜನರಲ್ ಮ್ಯಾನೇಜರ್ ಸುರೇಂದ್ರಕುಮಾರ್, ಲೋಕೇಶ್, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್ ಹಾಜರಿದ್ದರು.