24ಕ್ಕೆ ಕೈಮಗ್ಗ ನೇಯ್ಗೆ ಕೇಂದ್ರ ಉದ್ಘಾಟನೆ

udp-22-udupi saree
Published on

ಉಡುಪಿ: ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಆಶ್ರಯದಲ್ಲಿ ಜಿಲ್ಲಾಡಳಿತ, ನೇಕಾರರ ಸೇವಾ ಕೇಂದ್ರ, ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್​, ರೋಬೋಸಾಪ್ಟ್​ ಸಂಸ್ಥೆಗಳ ಸಹಕಾರದೊಂದಿಗೆ 30 ಹೊಸ ಶಿಬಿರಾರ್ಥಿಗಳಿಗೆ 2ನೇ ಹಂತದ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿ ಕಾರ್ಯಾಗಾರ ಹಾಗೂ ಕೈಮಗ್ಗ ನೇಯ್ಗೆ ಕೇಂದ್ರದ ಉದ್ಘಾಟನೆ ೆ.24ರಂದು ಬೆಳಗ್ಗೆ 10.30ಕ್ಕೆ ಬನ್ನಂಜೆ ಹಳೆ ಜಿಪಂ ಕಚೇರಿಯಲ್ಲಿ ನಡೆಯಲಿದೆ ಎಂದು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ್​ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ ಹೆಬ್ಬಾಳ್ಕರ್​ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಆತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಜಿಪಂ ಸಿಇಒ ಪ್ರತಿಕ್​ ಬಾಯಲ್​, ನಬಾರ್ಡ್​ ಜಿಎಂ ಟಿ.ರಮೇಶ್​, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ನಾಗರಾಜ ನಾಯಕ್​, ರೋಬೋ ಸಾಪ್ಟ್​ ಉಪಾಧ್ಯಕ್ಷ ಶ್ರೀಧರನ್​ ಕೇಶವನ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೇಕಾರರು ನೇಯುವ ಕೈಮಗ್ಗದ ಉತ್ಪನ್ನ ಉಡುಪಿ ಸೀರೆಗಳೆಂದು ದೇಶ ವಿದೇಶಗಳಲ್ಲೂ ಬಹಳ ಬೇಡಿಕೆಯನ್ನು ಹೊಂದಿದೆ. ಜಿಯೋಗ್ರಾಫಿಕಲ್​ ಇಂಡಿಕೇಶನ್​ ಟ್ಯಾಗ್​ ಹೊಂದಿರುವ ಉಡುಪಿ ಸೀರೆ ಪುನಶ್ಚೇತನಕ್ಕಾಗಿ ಕಳೆದ ಮೂರು ವರ್ಷಗಳಿಂದ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಜಿಲ್ಲಾಡಳಿತದ ಆಶ್ರಯದಲ್ಲಿ 25 ಯುವತಿಯರಿಗೆ ಶಿಷ್ಯ ವೇತನ, ಊಟ, ಉಪಹಾರ ಮತ್ತು ಪ್ರಯಾಣ ಭತ್ಯೆಯನ್ನು ಭರಿಸಿ ಮೊದಲ ಹಂತದ ತರಬೇತಿ ಕಾರ್ಯಾಗಾರ ಮುಗಿಸಿದೆ. 22 ಹೊಸ ನೇಕಾರರು, ಈಗಾಗಲೇ ವೃತ್ತಿಪರ ನೇಕಾರರಾಗಿ ನೇಯ್ದೆ ಕಾಯಕವನ್ನು ಆರಂಭಿಸಿದ್ದಾರೆ. ಪ್ರಸ್ತುತ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ 2 ವರ್ಷದ ಅವಧಿಗೆ ಜಾಗವನ್ನು ಪಡೆದು ತಮಿಳುನಾಡಿನ ಈರೋಡ್​ ಜಿಲ್ಲೆಯಿಂದ 50 ಮಲಬಾರ್​ ಕೈಮಗ್ಗಗಳನ್ನು ತಂದು ಜೋಡಿಸಲಾಗಿದೆ. ಇಲ್ಲಿ 2ನೇ ಹಂತದ ತರಬೇತಿ ಪ್ರಾರಂಭವಾಗಲಿದೆ ಎಂದರು.

ಸಹಕಾರಿ ಸಂದ ವ್ಯವಸ್ಥಾಪಕ ನಿರ್ದೇಶಕ ದಿನೇಶ್​ ಕುಮಾರ್​, ನಿರ್ದೆಶಕರಾದ ಪ್ರೇಮಾನಂದ ಶೆಟ್ಟಿಗಾರ್​, ದೇವರಾಜ್​ ಶೆಟ್ಟಿಗಾರ್​, ಈಶ್ವರ್​ ಶೆಟ್ಟಿಗಾರ್​ , ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net