

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಇದರ ಶ್ರೀ ಗುರುಸಾನ್ನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಮತ್ತು ಆಡಳಿತ ಕಚೇರಿ ಉದ್ಘಾಟನಾ ಸಮಾರಂಭ ಜುಲೈ 13ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ, ಉಪಾಧ್ಯಕ್ಷ ಭಗೀರಥ ಜಿ. ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ 2007-08 ರಲ್ಲಿ ಪ್ರಾರಂಭಗೊಂಡಿದ್ದು, ಸುದೀರ್ಘ 16 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಒಂದೊಂದು ಹೆಜ್ಜೆ ಮೇಲೆರುತ್ತ ಮುಂದಡಿ ಇಡುತ್ತಿದೆ.
ನೂತನ ಕೇಂದ್ರ ಕಚೇರಿ ಗುರುಸಾನ್ನಿಧ್ಯ ಸುಮಾರು 5.25 ಕೋಟಿ ರೂ.ವೆಚ್ಚದಲ್ಲಿ 11,100 ಚದರ ಅಡಿ ವಿಸ್ತೀರ್ಣವುಳ್ಳ 3 ಮಹಡಿಗಳನ್ನು ಹೊಂದಿದೆ. ನೆಲ ಮಹಡಿಯಲ್ಲಿ ಸುಸಜ್ಜಿತವಾದ ಪಾರ್ಕಿಂಗ್ ಸೌಲಭ್ಯ ಇದೆ. ಕೆಳಮಹಡಿ ಮತ್ತು ಪ್ರಥಮ ಮಹಡಿ ವಾಣಿಜ್ಯ ಉದ್ದೇಶದ ಸ್ಥಳವಾಗಿರುತ್ತದೆ. 2ನೇ ಮಹಡಿಯಲ್ಲಿ ಸುಸಜ್ಜಿತ ಆಡಳಿತ ಕಚೇರಿಯನ್ನು ಹೊಂದಿದ್ದು, 3ನೇ ಮಹಡಿ ಸುಮಾರು 300 ಮಂದಿ ಸಾಮರ್ಥ್ಯದ ಶ್ರೀಗುರುಸಾನ್ನಿಧ್ಯ ಸಭಾಂಗಣ ಹೊಂದಿರುತ್ತದೆ. ಲಿಫ್ಟ್ ಸೌಲಭ್ಯ, 60 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ ಮಾಡಲಾಗಿದೆ. 2022ರ ಸೆಪ್ಟೆಂಬರ್ 4ರಂದು ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಶಿಲಾನ್ಯಾಸ ಮಾಡಿದ್ದರು.
ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಲೋಕರ್ಪಣೆಗೊಳಿಸಲಿದ್ದಾರೆ. ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠ ಬೆಂಗಳೂರು ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ವಹಿಸಲಿದ್ದಾರೆ. ಆಡಳಿತ ಕಚೇರಿ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ನೆರವೇರಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಭಾಭವನವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಆ್ಯಪ್ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕಿ ಸುಜಿತಾ ವಿ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ ಗುರುಕೃಪಾ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ, ಧರಣೇಂದ್ರ ಕುಮಾರ್ ಪಿ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ ಸರ್ವೆದೋಳ, ಡಾ.ರಾಜಾರಾಮ ಕೆ.ಬಿ, ಜಯವಿಕ್ರಮ ಪಿ, ವಿಶೇಷಾಧಿಕಾರಿಗಳಾದ ಎಂ ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಉಪಸ್ಥಿತರಿದ್ದರು.