

ಮಡಿಕೇರಿ: ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಾ.೩೧ ರಂದು ಜನರಲ್ ತಿಮ್ಮಯ್ಯರವರ ೧೧೭ನೇ ಜನ್ಮದಿನಾಚರಣೆಯಂದು ಶಾಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸಂದರ್ಭ ಪುತ್ಥಳಿ ಉದ್ಘಾಟನೆ ಹಾಗೂ ನೂತನ ಶಾಲಾ ಕೊಠಡಿಗಳು ಉದ್ಘಾಟನೆಗೊಳ್ಳಲಿದೆ ಎಂದು ಶಾಲೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ವಿಖ್ಯಾತರಾಗಿರುವ ಜನರಲ್ ತಿಮ್ಮಯ್ಯರವರ ಹೆಸರಿನಲ್ಲೇ ಶಾಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಯುವ ವಿದ್ಯಾರ್ಥಿಗಳಿಗೆ ಪದ್ಮಭೂಷಣ ತಿಮ್ಮಯ್ಯರವರ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪುತ್ಥಳಿ ಸಿದ್ದಗೊಂಡಿದ್ದು, ಇದೀಗ ಶಾಲಾ ಆವರಣದಲ್ಲಿ ಇದರ ಅಳವಡಿಕೆಯ ಕೆಲಸ ನಡೆಯುತ್ತಿದೆ. ಪ್ರಸಿದ್ಧ ಶಿಲ್ಪಿ, ಮೈಸೂರಿನ ಅರುಣ್ ಯೋಗಿರಾಜ್ರವರು ಆಕರ್ಷಕ ಪುತ್ಥಳಿಯನ್ನು ಕೆತ್ತನೆ ಮಾಡಿದ್ದಾರೆ. ಅಂದಾಜು ರೂ.೧೦ ಲಕ್ಷ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕೆ ಮಡಿಕೇರಿ ಕೊಡವ ಸಮಾಜ, ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ಸಂಘ-ಸಂಸ್ಥೆಯವರು ದೇಣಿಗೆ ನೀಡಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪದ್ಮಶ್ರೀ ವಿಜೇತೆ ರಾಣಿ ಮಾಚಯ್ಯರವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.