

ಮಂಡ್ಯ: ಕೇಂದ್ರ ಸರ್ಕಾರ ಮೀನುಗಾರರ ಅಭಿವೃದ್ದಿಗೆಂದು ಪಿಎಂ ಮತ್ಸ್ಯ ಸಂಪದ ಯೋಜನೆಯಲ್ಲಿ 26 ಸಾವಿರ ಕೋಟಿ ರೂ ಮೀಸಲಿಟ್ಟಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾ ಮಹಿಳಾ ಗಂಗಾಮತಸ್ಥರ(ಬೆಸ್ತರ್) ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಹಿಳಾ ಸಂಘ ಉದ್ಘಾಟಿಸಿ ಮಾತನಾಡಿದ ಅವರು, 2023ರ ಬಜೆಟ್‌ನಲ್ಲಿ ಘೋಷಣೆಯಾದ ಹೊಸ ಯೋಜನೆಗಳ ಪೈಕಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಕೂಡ ಒಂದು. ಮೀನುಗಾರರಿಗೆ ನೆರವು ನೀಡಲೆಂದು ಈ ಹಿಂದೆಯೇ ಕೇಂದ್ರ ಸರ್ಕಾರ ಯೋಜನೆ ಜಾರಿ ಮಾಡಿತ್ತು. ಇದೀಗ ಈ ಯೋಜನೆಯಡಿ ಉಪಯೋಜನೆಯೊಂದನ್ನು ಜಾರಿ ಮಾಡಿ ಅನುದಾನ ನೀಡಿದೆ. ಅದನ್ನು ಮೀನುಗಾರರು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮೀನುಗಾರರು ಉದ್ಯಮಗಳನ್ನು ಸ್ಥಳೀಯವಾಗಿ ಸ್ಥಾಪಿಸಿ ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕಿದೆ. ಸ್ಥಳೀಯ ಗ್ರಾಮಗಳಲ್ಲಿರುವ ಕೆರೆ ಕಟ್ಟೆಗಳು ಅನ್ಯ ಕೋಮಿನವರ ಪಾಲಾಗುತ್ತಿರುವ ದೂರುಗಳು ಬರುತ್ತಿವೆ. ಆದರೆ ಸ್ಥಳೀಯ ಮೀನುಗಾರರ ಸಮುದಾಯಕ್ಕೆ ಲಭ್ಯವಾಗಬೇಕಿರುವ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಗಂಗಾಮತಸ್ಥ ಮತ್ತು ಉಪಪಂಗಡ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಲು ಹೋರಾಟ ನಡೆಯುತ್ತಿದೆ. ಅದರಂತೆ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರೊಂದಿಗೆ ಚರ್ಚಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನ ಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಡಾ.ಟಿ.ಕೃಷ್ಣಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆರ್ಥಿಕವಾಗಿ ದುರ್ಬಲಗೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೆ ನೆರವಾಗಲು ಸಂಘದಿಂದ ಗಂಗಾವಿದ್ಯಾಸಿರಿ ಯೋಜನೆ ಸ್ಥಾಪಿಸಲಾಗಿದೆ. ಅಂತೆಯೇ ಆರ್ಥಿಕ ನೆರವು ನೀಡಲು 1 ಕೋಟಿ ರೂ ಮೀಸಲಿಡಲಾಗಿದ್ದು, ಈಗಾಗಲೇ 16 ಲಕ್ಷ ರೂ ಸಂಗ್ರಹಿಲಾಗಿದೆ. ಇದಕ್ಕೆ ರಾಜ್ಯಮಟ್ಟದ ಪದಾಧಿಕಾರಿಗಳು ಆರ್ಥಿಕ ನೆರವು ನೀಡಲಿದ್ದಾರೆ ಎಂದು ತಿಳಿಸಿದರು.
ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಣ್ಣೂರು ನಾಗರಾಜು, ತಮ್ಮಣ್ಣ ಹಂಪಾಪುರ, ಮೀನುಗಾರಿಕೆ ಮಹಾಮಂಡಳಿ ಅಧ್ಯಕ್ಷ ಸಿದ್ದಲಿಂಗರಾಜು, ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷ ಎಸ್.ರಮೇಶ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೂನಗಹಳ್ಳಿ ಪುಟ್ಟಸ್ವಾಮಿ, ವಕೀಲ ಕೆ.ಕುಮಾರ್, ಜಿಲ್ಲಾ ಮಹಿಳಾ ಗಂಗಾಮತಸ್ಥರ ಸಂಘದ ಅಧ್ಯಕ್ಷೆ ಗಾಯಿತ್ರಿ, ಗೌರವಾಧ್ಯಕ್ಷೆ ಪಾರ್ವತಮ್ಮ, ಪ್ರಧಾನ ಕಾರ್ಯದರ್ಶಿ ಮಂಜುಳಾ ಇತರರಿದ್ದರು. ಇದೇ ಸಂದರ್ಭದಲ್ಲಿ ಹಲವರನ್ನು ಅಭಿನಂದಿಸಲಾಯಿತು. ಅಂತೆಯೇ ಜಾಗೃತಿ ಗೀತೆಗಳನ್ನು ಹಾಡಲಾಯಿತು.