

ಭಾಲ್ಕಿ: ಪುರಸಭೆ ವ್ಯಾಪ್ತಿಯ ಮನೆ, ನೀರು ಮತ್ತು ವಾಣಿಜ್ಯ ಕಟ್ಟಡ ಇತರ ಕೆಲಸಗಳಿಗೆ ತ್ವರಿತ ಗತಿಯಲ್ಲಿ ಪರವಾನಗಿ ಒದಗಿಸಲು ಹೊಸದಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಹೊರವಲಯದ ಖಂಡ್ರೆ ತಾಂಡಾ ಸಮೀಪ ಶುಕ್ರವಾರ ೨.೨೬ ಕೋಟಿ ರೂ. ವೆಚ್ಚದ ಮಲತ್ಯಾಜ್ಯ ಸಂಸ್ಕರಣ ಘಟಕ (ಎïಎಸ್‌ಟಿಪಿ) ಉದ್ಘಾಟಿಸಿದ ಅವರು, ಪಟ್ಟಣ ವ್ಯಾಪ್ತಿಯ ಜನರಿಗೆ ವಿವಿಧ ರೀತಿಯ ಪರವಾನಗಿ ಕೊಡಲು ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಹಿಂದಿನ ಸರ್ಕಾರದಲ್ಲಿ ಪೌರಾಡಳಿತ ಸಚಿವನಾಗಿದ್ದ ವೇಳೆ ಶೀಘ್ರ ಪರವಾನಗಿ ಒದಗಿಸಲು ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿತ್ತು. ನಂತರ ಸರ್ಕಾರ ಬದಲಾಗಿದ್ದರಿಂದ ಕೆಲಸ ನನೆಗುದಿಗೆ ಬಿದ್ದಿತ್ತು. ಶೀಘ್ರವೇ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ಸಂಬಂಧಿತರಿಗೆ ಸೂಚಿಸುವುದಾಗಿ ತಿಳಿಸಿದರು.
ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಸುವ ಗುರಿ ಹೊಂದಲಾಗಿದೆ. ಪಟ್ಟಣದಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕಾಗಿ ೨೦೧೬ರಲ್ಲಿ ಪೌರಡಳಿತ ಸಚಿವನಾಗಿದ್ದಾಗ ೨.೨೬ ಕೋಟಿ ಅನುದಾನ ಮಂಜೂರು ಮಾಡಿಸಿದ್ದೆ. ವಿಳಂಬವಾದರೂ ಇದೀಗ ಯೋಜನೆ ಪೂರ್ಣಗೊಂಡಿದ್ದು, ಪಟ್ಟಣ ಸ್ವಚ್ಛವಾಗಿರಿಸಲು ಈ ಘಟಕ ಸಹಕಾರಿ ಆಗಲಿದೆ ಎಂದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿ, ಜಿಲ್ಲೆಯ ನಗರ ಮತ್ತು ಪುರಸಭೆ ಬಲವರ್ಧನೆಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ಹಣಮಂತರಾವ ಚವ್ಹಾಣ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಅರುಣ, ಅಭಿಷೇಕ ಪೋಲಾ, ಯೋಗೇಶ್, ಪಲ್ಲವಿ ಬೆಳಕೇರೆ ಇತರರಿದ್ದರು. ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮೋತಿಲಾಲ್ ಲಂಬಾಣಿ ಪ್ರಾಸ್ತಾವಿಕ ಮಾತನಾಡಿದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.
ನೂರಾರೂ ಕೋಟಿ ರೂ. ಅನುದಾನ ಒದಗಿಸಿ ಭಾಲ್ಕಿ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೀದಿದೀಪ ಅಳವಡಿಕೆ ಸೇರಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವಿವಿಧ ಕಟ್ಟಡ, ಕೆರೆ ಅಭಿವೃದ್ಧಿಪಡಿಸಿದ್ದು, ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗಬೇಕು.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ