

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನ ಬದುಕಿನಲ್ಲಿ ಪಂಚ ತತ್ವಗಳಾದ ಅನ್ನ, ಅರಿವೆ, ಅರಿವು, ಆಶ್ರಯ, ಔಷಧಗಳು ಅಗತ್ಯ. ಇವು ರಾಜಕೀಯ ಮತ್ತು ಧಾರ್ಮಿಕ ತತ್ವಗಳಿಗಿಂತ ಮುಖ್ಯ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವವಿದ್ಯಾಲಯದ 38ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ. ಜೆ.ವಿ. ಗೌಡ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿಶ್ರಾಂತ ಕುಲಪತಿ ಡಾ. ಜೆ.ವಿ. ಗೌಡ ಮಾತನಾಡಿ, 1960ರ ದಶಕದಲ್ಲಿ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗಿತ್ತು. ಹಸಿರು ಕ್ರಾಂತಿಯ ಮುಖಾಂತರ ಆಹಾರ ಉತ್ಪಾದನೆಯಲ್ಲಿ ಕ್ರಾಂತಿಕಾರಕ ಹೆಚ್ಚಳ ತಂದು ರಫ್ತು ಮಾಡಲು ಕಾರಣರಾದ ಕೃಷಿ ವಿಜ್ಞಾನಿಗಳು ಸ್ಮರಣೀಯರು. ಕೃಷಿ ವಿದ್ಯಾರ್ಥಿಗಳು ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡಬೇಕು ಎಂದರು.
ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಶಿಕ್ಷಣ ತಜ್ಞ ಡಾ. ಎಸ್.ವಿ. ಪಾಟೀಲ ಪೀಠದ ವೆಬ್‌ಸೈಟ್ ಅನಾವರಣ ಮಾಡಿದರು. ಇದೇವೇಳೆ ಡಾ. ಜೆ.ವಿ. ಗೌಡ ಕುರಿತ ಅಭಿನಂದನಾ ಗ್ರಂಥ, ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಲಾಂಛನ ಬಿಡುಗಡೆ ಮಾಡಲಾಯಿತು.
ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಸಾಧನೆಗೈದ ವಿಜ್ಞಾನಿಗಳು, ಅತ್ಯುತ್ತಮ ಸೇವಾ ಸಿಬ್ಬಂದಿ, ಸಂಶೋಧನಾ ಕೇಂದ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ವಿ.ಆರ್. ಕಿರೇಸೂರ ಪರಿಚಯಿಸಿದರು. ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಡಿ. ಬಿರಾದಾರ, ಡಾ. ಎಂ.ವಿ. ಮಂಜುನಾಥ, ಡಾ. ಸರೋಜನಿ ಕರಕಣ್ಣವರ ಹಾಗೂ ವ್ಯವಸ್ಥಾಪನಾ ಮಂಡಳಿಯ ಸದಸ್ಯರಿದ್ದರು. ಕುಲಸಚಿವೆ ಜಯಲಕ್ಷ್ಮೀ ರಾಯಕೋಡ ವಂದಿಸಿದರು. ಡಾ. ಬಿ.ಎನ್. ಅರವಿಂದಕುಮಾರ ನಿರೂಪಿಸಿದರು.