20 ರಂದು ಜಿಲ್ಲಾ ಸಂಚಾರಿ ನ್ಯಾಯಾಲಯ ಉದ್ಘಾಟನೆ

hnd loyer pressmeet
ಹುನಗುಂದದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಂ. ಉಪ್ಪಾರ ವಿ.ಬಿ. ದಮ್ಮೂರಮಠ, ಉಮಾ ಎಸ್. ಬಳ್ಳೊಳ್ಳಿ, ಎಂ.ಎಸ್. ಸಂಗಮಕರ, ಪಿ.ಬಿ. ಹುಲ್ಯಾಳ ಇತರರಿದ್ದರು.
Published on

ಹುನಗುಂದ: ತಾಲೂಕು ನ್ಯಾಯಾಲಯ ಆವರಣದಲ್ಲಿರುವ ನೂತನ ಕಟ್ಟಡದಲ್ಲಿ ಏ.20 ರಂದು ಸಂಜೆ 5ಕ್ಕೆ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ ವಕೀಲರ ಸಂಘದ ಸಹಯೋಗದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಜಿಲ್ಲಾ ಮತ್ತು ಸತ್ರ ಸಂಚಾರಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಹೇಳಿದರು.

ಪಟ್ಟಣದ ನ್ಯಾಯಾಲಯದ ವಕೀಲರ ಸಂಘದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಹುದಿನಗಳ ಕನಸು ಈಗ ನನಸಾಗಿದೆ. ಈ ಭಾಗದ ಬಹುತೇಕ ಕಕ್ಷಿದಾರರು ಜಿಲ್ಲೆಗೆ ತಿರುಗುವುದು ತಪ್ಪಲಿದೆ. ಇನ್ಮುಂದೆ ವಾರಕ್ಕೆ 2 ದಿನ ಶುಕ್ರವಾರ ಮತ್ತು ಶನಿವಾರ ಜಿಲ್ಲಾ ಸತ್ರ ಸಂಚಾರಿ ನ್ಯಾಯಾಲಯ ಹುನಗುಂದದಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ನಮ್ಮ ಅವಳಿ ತಾಲೂಕಿನ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಈ ಭಾಗಕ್ಕೆ ಸಂಬಂಧಪಟ್ಟ ಜಿಲ್ಲಾ ನ್ಯಾಯಾಲಯದಲ್ಲಿರುವ ಪ್ರಕರಣಗಳು ಇನ್ಮುಂದೆ ಇದೆ ತಾಲೂಕಿನ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್ ಸಂಚಾರಿ ನ್ಯಾಯಾಲಯ ಉದ್ಘಾಟಿಸುವರು.

ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ, ರಾಜೇಂದ್ರ ಬದಾಮಿಕರ್ ಉಪಸ್ಥಿತರಿರುವರು. ಪ್ರಧಾನ ಜಿಲ್ಲಾ ಸತ್ರ ಮತ್ತು ನ್ಯಾಯಾಧೀಶ ಎನ್.ವಿ. ವಿಜಯ್ ಅಧ್ಯಕ್ಷತೆ ವಹಿಸುವರು. ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಠ್ಠಲಕೋಡ, ಸಿವಿಲ್ ನ್ಯಾಯಾಧೀಶ ಬಸವರಾಜ ನೇಸರಗಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಹನುಮಂತರಾವ್ ಕುಲಕರ್ಣಿ, ಇಳಕಲ್ಲ ವಕೀಲರ ಸಂಘದ ಅಧ್ಯಕ್ಷ ಬಿ.ವಿ. ಆವಟಿ, ಕಾರ್ಯಪಾಲ ಅಭಿಯಂತರ ರಾಜಶೇಖರ ಕಡಿವಾಳ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಂ. ಉಪ್ಪಾರ, ವಿ.ಬಿ. ದಮ್ಮೂರಮಠ, ಉಮಾ ಬಳ್ಳೊಳ್ಳಿ, ಎಂ.ಎಸ್. ಸಂಗಮಕರ, ಪಿ.ಬಿ. ಹುಲ್ಯಾಳ, ಮಹಾಂತೇಶ ಬಿಜಕಲ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net