

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಲೋಕಸಭೆ ಚುನಾವಣೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ನಡೆಯಲಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆ ತಿಳಿಸಿ, ಪಕ್ಷವನ್ನು ಸದೃಢಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಪಕ್ಷಕ್ಕೆ ನೂತನ ಅಧ್ಯಕ್ಷರು ಬಂದಿರುವ ಕಾರಣ ಒಂದಷ್ಟು ಬದಲಾವಣೆ ಮಾಡಲಾಗಿದೆ. ಬಿಜೆಪಿ ಒಂದು ಸಿದ್ಧಾಂತದ ಆಧಾರದಲ್ಲಿ ಕೆಲಸ ಮಾಡುತ್ತಿದೆ. ದೇಶ ಮೊದಲು, ವ್ಯಕ್ತಿ ಕೊನೆ ಎಂಬುದೇ ನಮ್ಮ ಅಜೆಂಡಾ ಎಂದರು.
ನೂತನ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ, ಪಕ್ಷಕ್ಕಾಗಿ ಎಬಿವಿಪಿಮಟ್ಟದಿಂದ ದುಡಿದಿದ್ದೇನೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಲುವಾಗಿ
ದಿನದ 24 ಗಂಟೆಗಳ ಕಾಲ ಕೆಲಸ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳ ಮೂಲಕವೇ ಮತಯಾಚನೆ ಮಾಡಲಾಗುವುದು ಎಂದರು.