

ಚಿಕ್ಕಮಗಳೂರು: ಕರೊನಾ ಸೋಂಕಿತರಿಗೆ ತ್ವರಿತ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಜಿಲ್ಲಾ ಕರೊನಾ ಕಂಟ್ರೋಲ್ ವಾರ್ ರೂಮ್ ಸ್ಥಾಪನೆಯಾಗಿದ್ದು ರಾಜ್ಯದಲ್ಲೇ ವ್ಯವಸ್ಥಿತವಾದ ಮತ್ತು ಮಾದರಿಯಾದ ಕಂಟ್ರೋಲ್ ರೂಂ ಇದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ಮಂಗಳವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಆರಂಭಿಸಲಾಗಿರುವ ಜಿಲ್ಲಾ ಕರೊನಾ ಕಂಟ್ರೋಲ್ ವಾರ್ ರೂಂ ಉದ್ಘಾಟಿಸಿ ಮಾತನಾಡಿದರು.
ಲೈನ್‍ಲಿಸ್ಟ್ ಆಪ್ ಅಭಿವೃದ್ಧಿ
ಈ ಹಿಂದೆ ಕರೊನಾ ಫಲಿತಾಂಶಗಳನ್ನು ದೇಶಾದ್ಯಂತ ಐಸಿಎಂಆರ್ ಪೋರ್ಟಲ್‍ನಲ್ಲಿ ಆಪ್‍ಲೋಡ್ ಮಾಡಲಾಗುತ್ತಿತ್ತು. ಪರಿಹಾರ ಆಪ್ ಮೂಲಕ ಜಿಲ್ಲೆಗಳು ಐಸಿಎಂಆರ್ ನಿಂದ ಮಾಹಿತಿ ಪಡೆದು ತಾಲೂಕುವಾರು ಲೈನ್‍ಲಿಸ್ಟ್ ಮಾಡಲಾಗುತ್ತಿತ್ತು. ಲೈನ್‍ಲಿಸ್ಟ್ ಆಪ್‍ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ ಆಪ್‍ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಇದೀಗ ಈ ಆಪ್‍ಗಳನ್ನು ವಿಲೀನಗೊಳಿಸಿ ಒಂದು ಲೈನ್‍ಲಿಸ್ಟ್ ಆಪ್ ಅಭಿವೃದ್ಧಿಪಡಿಸಲಾಗಿದ್ದು ಈ ಕಂಟ್ರೋಲ್ ವಾರ್ ರೂಂ ನಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ವಿಚಾರಣೆ-ನಿರ್ವಹಣೆ
ರಾಜ್ಯವಾರ್ ರೂಂಗೆ ನೇರವಾಗಿ ಸಂಪರ್ಕ ಹೊಂದಿ ಕೆಲಸ ನಿರ್ವಹಿಸಲಿರುವ ಕಂಟ್ರೋಲ್ ರೂಂನಲ್ಲಿ ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ತ್ವರಿತ ಮತ್ತು ಶೀಘ್ರ ಚಿಕಿತ್ಸೆಗೆ ಸ್ಪಂದಿಸಲಾಗುವುದು ಎಂದರು.
ರಾಜ್ಯ ವಾರ್ ರೂಂ ವಿಂಗಡಿಸಿದ ಪ್ರಕರಣಗಳನ್ನು ಜಿಲ್ಲಾ ಕಂಟ್ರೋಲ್ ರೂಂನಿಂದ ಪ್ರತಿದಿನ ವೀಕ್ಷಿಸಲಾಗುವುದು. ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಪ್ರತಿದಿನ ರೋಗಿಗಳಿಗೆ ಕರೆ ಮಾಡಿ ರೋಗದ ಲಕ್ಷಣ ಮತ್ತಿತರ ವಿವರ ಪಡೆದು ಕಂಟ್ರೋಲ್ ರೂಮ್‍ನಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕೆ.ಮಂಜುನಾಥ್ ಇದ್ದರು.