ಡಿಜಿಟಲ್ ಲೈಬ್ರರಿ ಪೋರ್ಟಲ್ ಉದ್ಘಾಟನೆ

fmcc college
Published on

ಮಡಿಕೇರಿ: ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗು ಐಕ್ಯೂಎಸಿ ವತಿಯಿಂದ ಡಿಜಿಟಲ್ ಲೈಬ್ರರಿ ಪೋರ್ಟಲ್ ಉದ್ಘಾಟನೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಡಿಜಿಟಲ್ ಲೈಬ್ರರಿ ಪೋರ್ಟಲ್ ಅನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸಮಯವನ್ನು ಹೆಚ್ಚಾಗಿ ಕಳೆಯುತ್ತಿದ್ದರು. ಇತ್ತೀಚೆಗೆ ಓದುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗ್ರಂಥಾಲಯಕ್ಕೆ ಬಂದು ಓದಲಾಗದೆ ಇರುವವರಿಗೆ ಡಿಜಿಟಲ್ ಗ್ರಂಥಾಲಯಗಳಿವೆ. ಈಗ ಗ್ರಂಥಾಲಯವು ಡಿಜಿಟಲ್ ಆಗಿದೆ. ಇದರ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊಫೆಸರ್ ರಾಘವ ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಂಥಾಲಯದಲ್ಲಿ ಹೆಚ್ಚು ಸಮಯವನ್ನು ಕಳೆದಷ್ಟು ನೀವು ಜೀವನದಲ್ಲಿ ಜ್ಞಾನದ ಅಭಿವೃದ್ಧಿಯನ್ನು ಹೊಂದುತ್ತೀರಿ ಎಂದು ಹಿತವಚನವನ್ನು ನುಡಿದರು.

ಕಾರ್ಯಕ್ರಮದಲ್ಲಿ ಲೈಬ್ರೆರಿಯನ್ ಪ್ರೊಫೆಸರ್ ವಿಜಯಲತಾ ಡಿಜಿಟಲ್ ಲೈಬ್ರರಿಯ ಮಹತ್ವವನ್ನು ತಿಳಿಸಿದರು. ಹಾಗೂ ಸರ್ವರನ್ನೂ ಸ್ವಾಗತಿಸಿದರು. ಡಿಜಿಟಲ್ ಲೈಬ್ರರಿ ಪೋರ್ಟಲ್‌ನಲ್ಲಿ ಪಠ್ಯಪುಸ್ತಕ, ಸ್ಪರ್ಧ್ಪತ್ಮಕ ಪರೀಕ್ಷೆ ಪುಸ್ತಕಗಳು, ಪ್ರಶ್ನೆ ಪತ್ರಿಕೆಗಳು ಹಾಗೂ ಅನುಕೂಲಕ್ಕೆ ತಕ್ಕಂತೆ ಯಾವುದೇ ಸಮಯದಲ್ಲಿ ಪಡೆಯಬಹುದಾಗಿ ಇ ಎಡ್ವಾಯ್ಸಾ ಲರ್ನಿಂಗ್ ಪೋರ್ಟಲ್ ಮಾಲೀಕ ಧೀರಜ್ ವಿದ್ಯಾರ್ಥಿಗಳಿಗೆ ತಿಳಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಡಿಜಿಟಲ್ ಪೋರ್ಟಲ್ ವ್ಯವಸ್ಥೆ ಕಲ್ಪಿಸಲು ಧನಸಹಾಯವನ್ನು ಒದಗಿಸಲಾಗಿತ್ತು. ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ಇನ್ನಷ್ಟು ಸಹಕಾರ ನೀಡಲಾಗುವುದಾಗಿ ಸಮಿತಿಯು ಭರವಸೆ ನೀಡಿತು.

ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರಾದ ಯಶೋಧ ಪೇರಿಯಂಡ, ಐಚಂಡ ರಶ್ಮಿ ಮೇದಪ್ಪ, ಮಾಗುಲು ಲೋಹಿತ್, ಚರಣ್ ಬಲ್ಯದ, ಪ್ರಶಾಂತ್ ಮುತ್ತಣ್ಣ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಕೆ.ಶೈಲಶ್ರೀ ನಿರೂಪಿಸಿದರೆ, ಪೂರ್ಣಿಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net