

ಹಳಿಯಾಳ: ತಾಲೂಕಿನ ನಂದಿಗದ್ದಾ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ ನೀಡಿದ ಹೇಳಿಕೆಯೊಂದು ಸಾರ್ವಜನಿಕರು ಹಾಗೂ ಕೊರ್ವೆಕರ ಮಧ್ಯೆ ಭಾರಿ ವಾಗ್ವಾದಕ್ಕೆ ಕಾರಣವಾಗಿ ಸಮಾರಂಭ ಗೊಂದಲದ ಗೂಡಾದ ಘಟನೆ ಮಂಗಳವಾರ ನಡೆಯಿತು.
ಶಾಸಕ ಆರ್.ವಿ. ದೇಶಪಾಂಡೆ ಅವರ ಆಪ್ತ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ ಅವರು ಮಾತನಾಡುವಾಗ ಸಹಕಾರಿ ಸಂಘಗಳು ಕೆಲ ರೈತರಿಗೆ ಸಾಲ ಸೌಲಭ್ಯ ನೀಡದೆ ವಂಚಿಸುತ್ತಿವೆ. ಕೆಡಿಸಿಸಿ ಬ್ಯಾಂಕಿನ ಕೆಲ ಸಿಬ್ಬಂದಿ ಗ್ರಾಹಕರಿಗೆ ಅಗತ್ಯ ಮಾಹಿತಿ ನೀಡುತ್ತಿಲ್ಲ. ತಾರತಮ್ಯ ಎಸಗುತ್ತಿದ್ದಾರೆ. ತಮಗೆ ಬೇಕಾದವರಿಗೆ ಮಾತ್ರ ಸಾಲ ಸೌಲಭ್ಯ ಒದಗಿಸುತ್ತಿದ್ದಾರೆ. ಇದರಿಂದಾಗಿ ಕೆಲ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ, ಸಹಕಾರಿ ಸಂಘ ವ್ಯಾಪ್ತಿಯ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿಯೂ ನಡೆಯಿತು.
ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಸಹಕಾರಿ ಮನೋಭಾವದಿಂದ ನಾವೆಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಆದರೆ, ಈ ಕಾರ್ಯಕ್ರಮದಲ್ಲಿ ನೀವು ರಾಜಕೀಯ ಬೆರೆಸುತ್ತಿದ್ದೀರಿ ಎಂದು ಕೊರ್ವೆಕರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಘಟನೆಯಿಂದ ಸುಭಾಸ ಕೊರ್ವೆಕರ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ತುಕಾರಾಮ ಗೌಡ ಮಾತನಾಡಿ, ಇದು ಸಹಕಾರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ರಾಜಕೀಯ ಮಾಡುವುದಾದರೆ ಅದಕ್ಕೆ ಬೇರೆ ವೇದಿಕೆಗಳಿವೆ ಎಂದು ಕೊರ್ವೆಕರ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸಹಕಾರಿ ಸಂಘಗಳು ಪಾರದರ್ಶಕತೆಯಿಂದ ಆಡಳಿತ ನಡೆಸಬೇಕು. ಸಹಕಾರಿಗಳು ರೈತರ ನೆರವಿಗೆ ನಿಂತು ಅವರಿಗೆ ಬೇಕಾದ ಅಗತ್ಯ ಸಾಲ ಸೌಲಭ್ಯ ಒದಗಿಸಿಕೊಡಬೇಕು. ಅದೇ ರೀತಿ ರೈತರು ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತಾರೋ ಅದನ್ನು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಯಶಸ್ಸು ಕಾಣಬೇಕು ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಲ್. ಘೊಟ್ನೆಕರ ಮಾತನಾಡಿ, ರೈತರು ಸಹಕಾರಿ ಬ್ಯಾಂಕ್ ಹಾಗೂ ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.
ವೇದಿಕೆಯಲ್ಲಿದ್ದ ಶಾಸಕ ಆರ್.ವಿ. ದೇಶಪಾಂಡೆ ಅವರು ಈ ಘಟನೆಯಿಂದ ಕೆಲಕಾಲ ವಿಚಲಿತರಾಗಿ ಕಾರ್ಯಕ್ರಮ ಮುಕ್ತಾಯ ಮಾಡುವಂತೆ ಸನ್ನೆ ಮಾಡುತ್ತಿದ್ದುದು ಕಂಡು ಬಂದಿತು. ತಕ್ಷಣ ಸಂಘಟಕರು ತರಾತುರಿಯಲ್ಲಿಯೇ ಕಾರ್ಯಕ್ರಮ ಸಮಾರೋಪಗೊಳಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಸುನೀಲ ಹೆಗಡೆ ಈ ಘಟನೆಗೂ ಮುನ್ನವೇ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.
ಹೆಸರಿಲ್ಲದಿದ್ದರೂ ವೇದಿಕೆ ಏರಿದ್ದ ಕೊರ್ವೆಕರ
ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ಕೆಲವರು ಹಲವು ಕಾರ್ಯಕ್ರಮದ ವೇದಿಕೆಯಲ್ಲಿ ಆಸೀನರಾಗುತ್ತಿರುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಶಾಸಕ ದೇಶಪಾಂಡೆ ಅವರೊಂದಿಗೆ ಆಗಮಿಸುವ ಕೆಲವರು ವೇದಿಕೆ ಅಲಂಕರಿಸುವುದು ಸಾಮಾನ್ಯವಾದಂತಾಗಿದೆ. ಇಲ್ಲೂ ಅದೇ ರೀತಿಯಾಗಿದ್ದು, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ವೇದಿಕೆಯಲ್ಲಿದ್ದರು. ಅಷ್ಟೇ ಅಲ್ಲದೆ, ಕೊರ್ವೆಕರ ಅವರು ಭಾಷಣ ಮಾಡಿದ್ದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಯಿತು.