ಗ್ಯಾರಂಟಿಗೆ ಹಣ ಕ್ರೋಡೀಕರಣದಲ್ಲಿ ಸಿಎಂ ಯಶಸ್ವಿ

mkg1c
Published on

ಚನ್ನಗಿರಿ: ಚುನಾವಣೆ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯಂತೆ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಾರಿಗೆ ತರಲು 55 ಸಾವಿರ ಕೋಟಿಗಳ ಹಣವನ್ನು ಕ್ರೋಡೀಕರಿಸುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಹೋಬಳಿ ದೊಡ್ಡಬ್ಬಿಗೆರೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ವಾಣಿಜ್ಯ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಶನಿವಾರ ಮಾತನಾಡಿದರು.

ಚುನಾವಣೆ ಸಮಯದಲ್ಲಿ ಪಕ್ಷದ ನಾಯಕರು ಗ್ಯಾರಂಟಿ ಕೊಡುವ ಬಗ್ಗೆ ಪ್ರಚಾರ ನಡೆಸಿದಾಗ, ಸುಳ್ಳು ಭರವಸೆ ನೀಡುತ್ತಾರೆ ಎಂದು ಅನೇಕರು ಅಪಪ್ರಚಾರ ಮಾಡಿದ್ದರು. ಆದರೆ, ಮತದಾರರು ಹೆಚ್ಚು ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ, ಕೊಟ್ಟ ಮಾತಿನಂತೆ ಅವರ ಋಣವನ್ನು ಗ್ಯಾರಂಟಿ ನೀಡುವ ಮೂಲಕ ತೀರಿಸುವ ಕೆಲಸ ಮಾಡಲಾಗಿದೆ ಎಂದರು.

ತಾಲೂಕಿನ ಜನಪ್ರತಿನಿಧಿಯಾಗಿ ಅಭಿವೃದ್ಧಿ ಮತ್ತು ಜನರ ಸಮಸ್ಯೆ ಬಗೆಹರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಂತ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸೂಳೆಕೆರೆ ನೀರು ಕುಡಿಯಲು ಯೋಗ್ಯವಿಲ್ಲದ್ದರಿಂದ ಎಸ್‌ಎಫ್‌ಸಿ ಯೋಜನೆಯಲ್ಲಿ 36 ಲಕ್ಷ ರೂ. ಅನುದಾನವನ್ನು ನೀರಿನ ಶುದ್ಧೀಕರಣ ಘಟಕಗಳ ದುರಸ್ಥಿಗಾಗಿ ನೀಡಲಾಗಿದೆ. ಪಟ್ಟಣ ಸೇರಿದಂತೆ 82 ಗ್ರಾಮಗಳ ಜನರಿಗೆ ಸದ್ಯಕ್ಕೆ ನೀರಿಗಾಗಿ ಬೇರೆ ವ್ಯವಸ್ಥೆ ಮಾಡಲಾಗಿದೆ ಎಂದರು.

ದೊಡ್ಡಬ್ಬಿಗೆರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಕಚೇರಿಗೆ ಸರಿಯಾಗಿ ಬರುತ್ತಿಲ್ಲ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ದೂರು ನೀಡಿದರು. ತಕ್ಷಣ ಶಾಸಕರು ಅಧಿಕಾರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಜತೆಗೆ, ಅವರನ್ನು ಬೇರೆಡೆ ವರ್ಗ ಮಾಡುವಂತೆ ಸ್ಥಳದಲ್ಲಿದ್ದ ಮೇಲಾಧಿಕಾರಿಗಳಿಗೆ ಆದೇಶಿಸಿದರು.

ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎನ್.ಬಿ. ಕೊಟ್ರಬಸಪ್ಪ, ಅಧ್ಯಕ್ಷ ಎಸ್. ರುದ್ರಮುನಿ, ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಜಿ. ನಾಗರಾಜಪ್ಪ, ಗ್ರಾಪಂ ಅಧ್ಯಕ್ಷ ಗಿರಿತಿಮ್ಮಪ್ಪ, ಉಪಾಧ್ಯಕ್ಷೆ ಅಂಜಿನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net