ಎಳನೀರು ಮಾರಾಟ ಕೇಂದ್ರ ಉದ್ಘಾಟನೆ

16 CRP-1A.
Published on

ಚನ್ನರಾಯಪಟ್ಟಣ: ತಾಲೂಕಿನ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಪಾರದರ್ಶಕ ಮಾರಾಟ ವ್ಯವಸ್ಥೆಗೆ ಅಧಿಕೃತ ಎಳನೀರು ಮಾರಾಟ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.


ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ತಾಲೂಕು ಎಳನೀರು ಮಾರಾಟಗಾರರ ಒಕ್ಕೂಟದಿಂದ ನಿರ್ಮಿಸಲಾಗಿರುವ ಅಧಿಕೃತ ಎಳನೀರು ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಬಹುಪಾಲು ರೈತರು ಕಲ್ಪವೃಕ್ಷ, ಕಾಮಧೇನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಮೃತ ಸದೃಶ ಜಲ ಎಂದೇ ಕರೆಯಲ್ಪಡುವ ಎಳನೀರಿನ ವ್ಯಾಪಾರ ಜನವರಿಯಿಂದ ಜೂನ್ ತಿಂಗಳವರೆಗೆ ಗರಿಷ್ಠ ಮಟ್ಟದಲ್ಲಿ ವ್ಯಾಪಾರ ನಡೆದು, ಜೂನ್ ತಿಂಗಳ ಡಿಸೆಂಬರ್‌ವರೆಗೂ ಕನಿಷ್ಠ ವ್ಯಾಪಾರ ನಡೆಯುತ್ತದೆ ಎಂದರು.


ಎಪಿಎಂಸಿ ಆವರಣದಲ್ಲಿ ಅಧಿಕೃತ ಮಾರಾಟ ಕೇಂದ್ರ ಪ್ರಾರಂಭವಾಗುವುದರಿಂದ ರೈತರಿಂದ ಎಳನೀರು ಖರೀದಿ ಸಂದರ್ಭದಲ್ಲಿ ಉಂಟಾಗುತ್ತಿರುವ ದಲ್ಲಾಳಿ ಹಾವಳಿ ಹಾಗೂ ಕಮಿಷನ್ ಹಾವಳಿ ತಪ್ಪಿಸಲು ಸಹಕಾರಿಯಾಗುತ್ತದೆ. ಇವುಗಳು ತಮ್ಮ ವ್ಯಾಪ್ತಿಯಲ್ಲಿ ಬರುವುದರಿಂದ ರೈತರಿಗೂ ನೆರವಾಗಲಿದೆ ಹಾಗೂ ಎಪಿಎಂಸಿಗೂ ಆದಾಯ ಬರಲಿದೆ ಎಂದರು.


ತಾಲೂಕಿನಲ್ಲಿ ಶೇ.20 ರಷ್ಟು ಮಾತ್ರ ನೀರಿನ ಮೂಲವಿದ್ದು, ಶೇ.80 ರಷ್ಟು ಒಣ ಭೂಮಿ ಇದೆ. ಏತ ನೀರಾವರಿ ಮೂಲಕ ತಾಲೂಕಿನ ಎಲ್ಲ ಕೆರೆಕಟ್ಟೆಗಳನ್ನು ತುಂಬಿಸಿ ತೆಂಗು ಬೆಳೆ ಪುನಶ್ಚೇತನ ಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಎಳನೀರಿಗೆ ಉತ್ತಮವಾದ ಬೇಡಿಕೆ ಇದ್ದು, ಕೊಬ್ಬರಿ ಸಹ ಉತ್ತಮ ಬೆಲೆ ದೊರೆಯುತ್ತಿದೆ. ತೆಂಗು ಮಾರಾಟಗಾರ ಒಕ್ಕೂಟ ಸ್ಥಾಪನೆಯಾಗಿ ಎಳನೀರಿನ ನೇರ ಮಾರಾಟ ಕೇಂದ್ರವನ್ನು ಪ್ರಾರಂಭಿಸಿರುವುದರಿಂದ ರೈತರ ಮತ್ತು ಗ್ರಾಹಕರ ನಡುವೆ ಉತ್ತಮ ಸಂಪರ್ಕ ಏರ್ಪಡುತ್ತದೆ ಎಂದರು.


ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ವೇ ಬ್ರಿಡ್ಜ್ ದುರಸ್ತಿಗೊಳಿಸಲು ಹಾಗೂ ಶ್ರವಣಬೆಳಗೊಳದಲ್ಲಿ ನೂತನ ವೇ ಬ್ರಿಡ್ಜ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.


ಎಪಿಎಂಸಿ ಮಾಜಿ ನಿರ್ದೇಶಕರಾದ ಬಿ. ಎಚ್.ಶಿವಣ್ಣ, ವಿ.ಎನ್.ಮಂಜುನಾಥ್, ಎಂ.ಆರ್. ಅನಿಲ್ ಕುಮಾರ್, ಶ್ರೀನಿವಾಸ್, ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕ ಶ್ರೀಹರಿ, ಎಪಿಎಂಸಿ ಆಡಳಿತಾಧಿಕಾರಿ ವಿಜಯಲಕ್ಷ್ಮೀ, ತೆಂಗಿನಕಾಯಿ ವ್ಯಾಪಾರಿ ಪೂಮಡಿಹಳ್ಳಿ ಜಗದೀಶ್‌ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net