ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹ ಅನ್ವೇಷಣಾ ಕೇಂದ್ರ ಉದ್ಘಾಟನೆ|Co Innovation Center

nitte
Published on

ಬೆಂಗಳೂರು: ನವನವೀನ ತಂತ್ರಜ್ಞಾನದ ಅನ್ವೇಷಣೆ ಕುರಿತು ಸಂಶೋಧನಾ ಪ್ರಬಂಧಗಳನ್ನು ವಿಶ್ವವಿಖ್ಯಾತ ತಾಂತ್ರಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸುವಲ್ಲಿ ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ಐ-ಹಬ್ ಫೌಂಡೇಶನ್ ಫಾರ್ ಕೊಬೋಟಿಕ್ಸ್‌ನ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶುತೋಷ್ ದತ್ತ ಶರ್ಮ(Ashutosh Dutta Sharma) ಹೇಳಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹ ಅನ್ವೇಷಣಾ ಕೇಂದ್ರ(ಕೊ-ಇನ್ನೊವೆಶನ್ ಸೆಂಟರ್) (Inauguration of Co Innovation Center at Nitte Meenakshi Technical College)ಉದ್ಘಾಟಿಸಿ ಮಾತನಾಡಿದರು.

ವಿಚಿತ್ರವೆಂದರೆ ನಮ್ಮ ದೇಶ ಅನ್ವೇಷಣೆಗಳನ್ನು ಅನುಷ್ಠಾನಗೊಳಿಸಿ ತತ್ಸಂಬಂಧಿತ ಉತ್ಪನ್ನಗಳ ಉದ್ಯಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಹಳ ಹಿಂದಿದೆ. ಬಹುಶಃ ಇಡೀ ವಿಶ್ವದಲ್ಲಿ ಭಾರತ 30ನೇ ಸ್ಥಾನ ಗಳಿಸಲೂ ಕಷ್ಟಸಾಧ್ಯವೆನ್ನಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅನ್ವೇಷಣೆಯ ಹೊಳಹು ಹಾಗೂ ಅನುಷ್ಠಾನಗಳ ನಡುವಿನ ಭಾರೀ ಅಂತರವನ್ನು ಕಡಿಮೆ ಮಾಡಲು ಮತ್ತು ಉತ್ಪಾದನೆಯ ಗುರಿ ಹೊಂದಿದ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್  ಆಫ್ ಟೆಕ್ನಾಲಜಿಯಲ್ಲಿ ಐ-ಹಬ್  ಫೌಂಡೇಶನ್ ಫಾರ್  ಕೊಬೋಟಿಕ್ಸ್ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಈ ಸಂಸ್ಥೆ ದೇಶದ ಆಯ್ದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಹತ್ತು ಸಹ ಅನ್ವೇಷಣಾ ಕೇಂದ್ರ (ಕೊ-ಇನ್ನೊವೇಶನ್ ಸೆಂಟರ್)ಗಳನ್ನು ಸ್ಥಾಪಿಸುತ್ತಿದೆ ಎಂದು ಹೇಳಿದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಅಳವಡಿಸಲು ತಾವೇ ಸ್ವತಃ ಉದ್ಯಮಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಹ ಅನ್ವೇಷಣಾ ಕೇಂದ್ರ ವಿದ್ಯಾರ್ಥಿಗಳ ಹಾಗೂ ತಂತ್ರಜ್ಞಾನದ ಹೊಸ ಪದವೀಧರರ ಔದ್ಯಮಿಕ ಕನಸುಗಳನ್ನು ನನಸಾಗಿಸಲು ವೇದಿಕೆ ಕಲ್ಪಿಸಲು ಶ್ರಮಿಸಲಿದೆ ಎಂದು ಆಶ್ವಾಸನೆ ನೀಡಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಹ ಅನ್ವೇಷಣಾ ಕೇಂದ್ರದ ಮಾರ್ಗದರ್ಶಕ ಡಾ. ಪ್ರಶಾಂತ್ ಎನ್. ಮಾತನಾಡಿ, ಈ ಕೇಂದ್ರ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ನೂತನ ಪದವೀಧರರಿಗೆ ಸ್ಟಾರ್ಟ್‌ಅಪ್‌ಗಳ ಸ್ಥಾಪನೆ ಮಾಡಲು ಎಲ್ಲ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ಅಮೆರಿಕದ ಪೆನ್ನ್ ಸ್ಟೇಟ್ ಯೂನಿವರ್ಸಿಟಿಯ ಅಂತರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಡಾ. ಓಮಿದ್ ಅನ್ಸಾರಿ, ದೆಹಲಿಯ ಐಐಟಿಯ ಐ-ಹಬ್ ೌಂಡೇಷನ್ ಾರ್ ಕೊಬೋಟಿಕ್ಸ್‌ನ ಕ್ಯಾಂಪಸ್ ಸಲಹೆಗಾರ ಡಾ. ಆಕಾಶ್ ಸೊಂದಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಆವರಣದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net