

ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಟರಿ ಕ್ಲಬ್ ವತಿಯಿಂದ ನಗರದ ಸಪ್ತಾಪುರದಲ್ಲಿ ನಿರ್ಮಿಸಿರುವ ಬಸ್ ತಂಗುದಾಣ ಉದ್ಘಾಟನೆ ಸಮಾರಂಭವನ್ನು ಆ. 27ರಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ. ಎಸ್.ಟಿ. ನಂದಿಬೇವೂರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಬಸ್ ತಂಗುದಾಣ ಉದ್ಘಾಟಿಸುವರು. ಅತಿಥಿಗಳಾಗಿ ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಕ್ಲಬ್ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಸಪ್ತಾಪುರ ಹಾಗೂ ಸುತ್ತಲಿನ ನಿವಾಸಿಗಳಿಗೆ ಬಸ್ ತಂಗುದಾಣ ಇರಲಿಲ್ಲ. ಹೀಗಾಗಿ ರೋಟರಿ ವತಿಯಿಂದ 1.80 ಲಕ್ಷ ರೂ. ವೆಚ್ಚದಲ್ಲಿ ತಂಗುದಾಣ ನಿಮಿರ್ಸಲಾಗಿದೆ. 2023-24ನೇ ಸಾಲಿನ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಇತ್ತೀಚೆಗೆ ಧಾರವಾಡ ರೋಟರಿ ಕ್ಲಬ್ಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರಶಸ್ತಿ ಲಭಿಸಿದೆ ಎಂದರು.
ನಗರದ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಶಾಲೆಗಳಿಗೆ ಲ್ಯಾಬ್ ಉಪಕರಣ, ಮೇಜು, ಸೇರಿ ಇತರ ವಸ್ತುಗಳನ್ನು ಒದಗಿಸಲಾಗಿದೆ. ಇದಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ಪೊರೆ ಚಿಕಿತ್ಸೆ, ವಿವಿಧ ಸೇವೆಗಳನ್ನು ನೀಡಲಾಗಿದೆ ಎಂದರು.