

ಮೈಸೂರು: ಕೃಷ್ಣಮೂರ್ತಿಪುರಂನ ಭಗಿನಿ ಸೇವಾ ಸಮಾಜದ ಆವರಣದಲ್ಲಿ ನೂತನ ‘ಬಿಎಸ್‌ಎಸ್ ವಿದ್ಯೋದಯ’ ಶಾಲೆಯ ಭವ್ಯ ಕಟ್ಟಡ ತಲೆಯೆತ್ತಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಮೇ 23ರಂದು ಸಂಜೆ 5ಕ್ಕೆ ನಡೆಯಲಿದೆ.
ಉಡುಪಿಯ ಪಾಲಿಮಾರ ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಲಾ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಸಾಧನೆಗೈದಿರುವ ಸಂಸ್ಥೆಗಳಲ್ಲಿ ಒಂದಾದ ಭಗಿನಿ ಸೇವಾ ಸಮಾಜವನ್ನು 1923ರಲ್ಲಿ ವೈ.ಕೆ.ಅಮೃತಾಬಾಯಿ ಪ್ರಾರಂಭಿಸಿದರು. ಚಿತ್ರಕಲೆ, ಸಂಗೀತ, ಟೈಲರಿಂಗ್, ವಿವಿಧ ಭಾಷೆಗಳ ಕಲಿಕೆ, ಗುಣಮಟ್ಟದ ಶಿಕ್ಷಣದೊಂದಿಗೆ ಮಹಿಳಾ ಸಬಲೀಕರಣಗೊಳಿಸುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. ಹೀಗಾಗಿ, ಮೊದಲು ಬಾಲಕಿಯರ ಶಾಲೆ ಮಾತ್ರ ಇತ್ತು ಎಂದು ವಿವರಿಸಿದರು.
ಅಮೃತಾಬಾಯಿ ನಂತರ ಅವರ ಪುತ್ರಿ ಎಸ್.ಕೆ.ಸುರಮಾ ಬಾಯಿ ಈ ಶಾಲೆಯನ್ನು ಮುನ್ನಡೆಸಿದರು. 1963ರಲ್ಲಿ ಬಾಲಕ-ಬಾಲಕಿಯರ ಶಾಲೆಯಾಯಿತು. 1 ರಿಂದ 10ನೇ ತರಗತಿ ವರೆಗೆ 1 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಇದು ಮೈಸೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿತ್ತು. ಕಾಲ ನಂತರ ವಿವಿಧ ಶಾಲೆಗಳು ಸ್ಥಾಪನೆಗೊಂಡಿದ್ದರಿಂದ ಈ ಶಾಲೆಯ ಪ್ರವೇಶಾತಿ ಕುಂಠಿತವಾಯಿತು. ಜತೆಗೆ, ಸುರಮಾ ಬಾಯಿ ಕುಟುಂಬ ಬೆಂಗಳೂರಿಗೆ ತೆರಳುತ್ತಿದ್ದಂತೆ ಶಾಲೆಯ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಸವಾಲಾಗಿ ಪರಿಣಮಿಸಿತು. ಅಂತಹ ಸಂದರ್ಭದಲ್ಲಿ 2011ರಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು ಎಂದು ತಿಳಿಸಿದರು.
1968ರಲ್ಲಿ ನಿರ್ಮಾಣವಾಗಿದ್ದ ಕಟ್ಟಡ ಬಹಳಷ್ಟು ಶಿಥಿಲವಾಗಿತ್ತು. ಈ ಕಟ್ಟಡದಲ್ಲಿ ಶಾಲೆ ನಡೆಸಲು ಯೋಗ್ಯವಾಗಿರಲಿಲ್ಲ. ಈ ಕಾರಣಕ್ಕೆ ಸಂಸ್ಥೆಯನ್ನು ಮುಚ್ಚಲು ಮತ್ತು ಅದರ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸಲು ನಿರ್ಧರಿಸಲಾಯಿತು. ಶಾಲೆ ಮುಚ್ಚುವ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ 250ರ ಆಸುಪಾಸಿನಲ್ಲಿತ್ತು. 2022ರಲ್ಲಿ ಆ ಮಕ್ಕಳನ್ನು ಸಮೀಪದ ಶಾಲೆಗಳಿಗೆ ವರ್ಗಾಯಿಸುವ ವ್ಯವಸ್ಥೆ ಮಾಡಲಾಯಿತು ಎಂದು ವಿವರಿಸಿದರು.
2022ರ ಜುಲೈ 8ರಂದು ನೂತನ ಕಟ್ಟಡದ ಭೂಮಿಪೂಜೆಯನ್ನು ನಡೆಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಕಾರ ಹೊಸ ಕಟ್ಟಡವನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುರಕ್ಷತಾ ಕ್ರಮದೊಂದಿಗೆ ಇದನ್ನು ರೂಪಿಸಲಾಗಿದೆ ಎಂದರು.
ಈ ಶಾಲೆಗೆ ‘ಬಿಎಸ್‌ಎಸ್ ವಿದ್ಯೋದಯ’ ಎಂದು ಹೆಸರಿಡಲಾಗಿದ್ದು, ಪ್ರಸಕ್ತ 2024-25ನೇ ಸಾಲಿನಿಂದಲೇ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಲಿದೆ. ಸಿಬಿಎಸ್‌ಇ ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದು, ಸದ್ಯಕ್ಕೆ ಪೂರ್ವ ಪ್ರಾಥಮಿಕ ಶಾಲೆ(ಎಲ್‌ಕೆಜಿ, ಯುಕೆಜಿ), 1 ರಿಂದ 5ನೇ ತರಗತಿಯವರೆಗೆ ಮಾತ್ರ ಇರಲಿದೆ. ಮುಂದಿನ ವರ್ಷದಿಂದ 8ನೇ ತರಗತಿ ಸಹ ಶುರು ಮಾಡಲಾಗುವುದು ಎಂದರು.
ವರ್ಷಕ್ಕೆ ಎಲ್‌ಕೆಜಿ, ಯುಕೆಜಿಗೆ 25 ಸಾವಿರ ರೂ. ಮತ್ತು 1ರಿಂದ 5ನೇ ತರಗತಿಗೆ 60 ಸಾವಿರ ರೂ. ಶುಲ್ಕ, ಒಂದು ಸಲಕ್ಕೆ 15 ಸಾವಿರ ರೂ. ವಂತಿಕೆ ನೀಡಬೇಕಾಗುತ್ತದೆ. ಸದ್ಯಕ್ಕೆ 150 ವಿದ್ಯಾರ್ಥಿಗಳು ದಾಖಲಾಗಿದ್ದು, 250 ಮಕ್ಕಳು ಪ್ರವೇಶ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದರು.
ಟ್ರಸ್ಟ್‌ನ ಖಜಾಂಚಿ ಎಚ್.ಟಿ.ಸ್ವರ್ಣಕುಮಾರ್, ಟ್ರಸ್ಟಿ ಎಚ್.ಮುರಳೀಧರ್ ಭಟ್ ಇದ್ದರು.