ಮೈಸೂರಿನಲ್ಲಿ ಬಿಎಸ್‌ಎಸ್ ವಿದ್ಯೋದಯ ಲೋಕಾರ್ಪಣೆ

BSS Vidyodaya
Published on

ಮೈಸೂರು: ವೈ.ಕೆ. ಅಮೃತಬಾಯಿ ಎಸ್.ಕೆ. ಸುರಮಾ ಬಾಯಿ ಭಗಿನಿ ಸೇವಾ ಸಮಾಜ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಶ್ರೀ ವಿಜಯ ವಿಠಲ ವಿದ್ಯಾ ಪ್ರತಿಷ್ಠಾನ ವತಿಯಿಂದ ನಗರದ ಕೃಷ್ಣಮೂರ್ತಿಪುರಂನಲ್ಲಿ 30 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ‘ಬಿಎಸ್‌ಎಸ್ ವಿದ್ಯೋದಯ’ ವಿದ್ಯಾಸಂಸ್ಥೆ ಗುರುವಾರ ಲೋಕಾರ್ಪಣೆಗೊಂಡಿತು.

ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿದ್ಯಾಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿಯ ಭವಿಷ್ಯವನ್ನು ಆಕಾಶದಲ್ಲಿರುವ ಗ್ರಹ, ನಕ್ಷಗಳನ್ನು ನೋಡಿ ತೀರ್ಮಾನ ಮಾಡಲಾಗುತ್ತದೆ. ಆದರೆ, ಒಂದು ದೇಶದ ಭವಿಷ್ಯವನ್ನು ಗ್ರಹ, ನಕ್ಷಗಳನ್ನು ನೋಡಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಬದಲಾಗಿ ಆ ದೇಶದಲ್ಲಿ ನಕ್ಷತ್ರದಂತೆ ಹೊಳೆಯುವ ಮಕ್ಕಳ ಮುಖದಲ್ಲಿ ಆ ದೇಶದ ಭವಿಷ್ಯವನ್ನು ಕಾಣಬಹುದು. ಅಂತಹ ಉತ್ತಮ ಮಕ್ಕಳನ್ನು ತಯಾರಿಸುವ ಕಾರ್ಯ ಬಿಎಸ್‌ಎಸ್ ವಿದ್ಯೋದಯ ವಿದ್ಯಾಸಂಸ್ಥೆ ಮಾಡಲಿದೆ ಎಂದು ಹೇಳಿದರು.

ಕೇವಲ ವಿದ್ಯೆ ಇದ್ದರೆ ಮಾತ್ರ ಸಾಲದು, ಉತ್ತಮ ಸಂಸ್ಕೃತಿಯ ಅವಶ್ಯಕತೆ ಇದೆ. ವಿದ್ಯೆಯ ಜತೆಗೆ ಉತ್ತಮ ಸಂಸ್ಕಾರ ನೀಡುವುದು ಈ ವಿದ್ಯಾಸಂಸ್ಥೆಯ ಧ್ಯೇಯ ಕೂಡ ಅದೇ ಆಗಿದೆ. ಇಲ್ಲಿನ ಮಕ್ಕಳು ಹೊಳೆಯುವ ನಕ್ಷತ್ರಗಳಾಗಿ ಕೇವಲ ದೇಶ ಮಾತ್ರವಲ್ಲ ಪ್ರಪಂಚವನ್ನು ಬೆಳಗುವವರಾಗಲಿ ಎಂದು ಹಾರೈಸಿದರು.

ಹಲವಾರು ಜನರ ಪರಿಶ್ರಮದಿಂದ ಬಿಎಸ್‌ಎಸ್ ವಿದ್ಯೋದಯ ವಿದ್ಯಾಸಂಸ್ಥೆ ನಿರ್ಮಾಣಗೊಂಡಿದೆ. ಸಾಂಸ್ಕೃತಿಕ ನಗರಿಯ ಜನರು ಉದಾರ ಮನಸ್ಸಿನಿಂದ ದಾನ ನೀಡಿದ್ದಾರೆ. ದಾನಿಗಳು ಕೇವಲ ದಾನ ನೀಡುವುದು ಮಾತ್ರವಲ್ಲದೆ ಹಲವಾರು ಜನರ ಮೂಲಕ ದಾನ ಕೊಡಿಸಿದ್ದಾರೆ ಎಂದು ಸ್ಮರಿಸಿದರು.

ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ ಮಾತನಾಡಿ, ದೇವ ಸ್ವರೂಪರಾದ ಮಕ್ಕಳು ಕಲಿಯುವ ವಿದ್ಯಾಸಂಸ್ಥೆ ಇದಾಗಿದೆ. ಈ ವಿದ್ಯಾಸಂಸ್ಥೆಯಲ್ಲಿನ ಪ್ರತಿಯೊಂದು ಮಕ್ಕಳು ಕಲಿತು ಶ್ರೀರಾಮನ ರೀತಿಯಲ್ಲಿ ದೇಶವನ್ನು ಬೆಳಗಲಿ ಎಂದು ಹಾರೈಸಿದರು.

ವಿದ್ಯೆ ಎಂಬುದು ಸಂಪತ್ತು. ಆ ಸಂಪತ್ತನ್ನು ದಾನ ಮಾಡಿದರೆ ವೃದ್ಧಿಯಾಗುತ್ತಾ ಹೋಗುತ್ತದೆ. ಬೇರೆ ಸಂಪತ್ತುಗಳು ದಾನ ಮಾಡಿದಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ವಿದ್ಯಾಸಂಪತ್ತು ದಾನ ಮಾಡಿದಷ್ಟು ಗಂಗಾ ನದಿಯ ಹಾಗೆ ಹರಿಯುತ್ತಲೇ ಇರುತ್ತದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದು ಹೇಳಿದರು.

ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಜ್ಞಾನ ಬಹಳ ಮುಖ್ಯವಾದದ್ದು. ಅದರ ಜತೆಗೆ ಸಂಸ್ಕಾರವೂ ಅವಶ್ಯಕ. ವಿದ್ಯೆ ಹಾಗೂ ಸಂಸ್ಕಾರ ಎರಡೂ ಕೂಡಿದರೆ ಮನುಷ್ಯ ಅತ್ಯುತ್ತಮವಾಗಿ ಬೆಳೆಯಲು ಸಾಧ್ಯ. ಅಲ್ಲದೆ, ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ. ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ದೊರೆಯಬೇಕಾಗಿದೆ. ಮಕ್ಕಳು ಏನಾದರು ತಪ್ಪು ಮಾಡಿದರೆ ಪಾಲಕರು ಸಹಿಸಿಕೊಳ್ಳುವ ಪರಿಸ್ಥಿತಿ ಪ್ರಸ್ತುತ ಇದೆ. ಇಂದಲ್ಲ ನಾಳೆ ಮಕ್ಕಳು ಸರಿ ಹೋಗುತ್ತಾರೆ ಎಂಬ ಭಾವನೆ ಪಾಲಕರಲ್ಲಿ ಇದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದಿ ಮಾತಿನಂತೆ ಮಕ್ಕಳಾಗಿರುವಾಗಲೇ ಮಕ್ಕಳನ್ನು ತಿದ್ದಿ ಅವರಲ್ಲಿ ಉತ್ತಮ ಸಂಸ್ಕಾರ ತುಂಬಬೇಕು ಎಂದರು.

ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಜಗತ್ತಿನಲ್ಲಿ ಮತ್ತೊಂದು ಇಲ್ಲ. ಜಗತ್ತಿನಲ್ಲಿ ಮನ್ನಣೆ ಗಳಿಸಲು ಅವಕಾಶ ಇರುವುದು ಜ್ಞಾನಿಗಳಿಗೆ ಮಾತ್ರ. ಅಂತಹ ಜ್ಞಾನ ನೀಡುವ ವಿದ್ಯಾಸಂಸ್ಥೆಗಳು ಉತ್ತಮವಾಗಿ ಬೆಳೆಯಬೇಕು. ಬಿಎಸ್‌ಎಸ್ ವಿದ್ಯೋದಯ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಾರಂಭಗೊಳ್ಳಲಿದೆ. ಪ್ರಾರಂಭಕ್ಕೂ ಮುನ್ನವೇ ಶಾಲೆಗೆ 150 ಮಕ್ಕಳು ದಾಖಲಾಗಿರುವುದನ್ನು ಗಮನಿಸಿದರೆ ವಿದ್ಯಾಸಂಸ್ಥೆಯ ಮೇಲೆ ಪಾಲಕರು ಎಷ್ಟೊಂದು ನಂಬಿಕೆ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಎಸ್‌ಎಸ್ ವಿದ್ಯೋದಯ ಗೌರವ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ಭಗಿನಿ ಸೇವಾ ಸಮಾಜ 101 ವರ್ಷಗಳನ್ನು ಪೂರೈಸಿದೆ. ಪ್ರಾರಂಭದಲ್ಲಿ ಮಹಿಳಾ ಸಬಲೀಕರಣದ ಚಟುವಟಿಕೆಗಳು ಸಂಸ್ಥೆಯಲ್ಲಿ ಪ್ರಾರಂಭವಾಯಿತು. 1968ರಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಯಿತು. ಮತ್ತಷ್ಟು ಉತ್ತಮ ವಾತಾವರಣದಲ್ಲಿ ಮಕ್ಕಳಿಗೆ ವಿದ್ಯೆ ನೀಡಬೇಕು ಎಂಬ ಉದ್ದೇಶದೊಂದಿಗೆ ಭಗಿನಿ ಸೇವಾ ಸಮಾಜವು ಶ್ರೀ ವಿಜಯ ವಿಠಲ ವಿದ್ಯಾ ಪ್ರತಿಷ್ಠಾನ ಜತೆಗೂಡಿ ‘ಬಿಎಸ್‌ಎಸ್ ವಿದ್ಯೋದಯ’ ಪ್ರಾರಂಭಿಸಿದೆ ಎಂದು ಹೇಳಿದರು.

ಈ ವಿದ್ಯಾಸಂಸ್ಥೆಯು ಸಿಬಿಎಸ್‌ಇ ಪಠ್ಯ ಕ್ರಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಿದೆ. 30 ಕೋಟಿ ರೂ.ವೆಚ್ಚದಲ್ಲಿ ಒಂದು ವರ್ಷದಲ್ಲಿ ಈ ಶಾಲೆಯ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸಲಾಗಿದೆ. ಪ್ರಸಕ್ತ ಸಾಲಿನಿಂದಲೇ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗಲಿದೆ. ಒಟ್ಟು 150 ಮಕ್ಕಳ ಪ್ರವೇಶಾತಿಯಾಗಿದೆ. ಜೂನ್ ಒಳಗೆ 250 ರಿಂದ 300 ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಶಾಲೆ ನಿರ್ಮಾಣ ಮಾಡಲಾಗಿದೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ ಪ್ರಕಾರ ಕಟ್ಟಡ ನಿರ್ಮಿ ಸಲಾಗಿದೆ. ಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಲಾಗಿದೆ. ಶಾಲೆಯಲ್ಲಿ ಸೇವೆ ಸಲ್ಲಿಸಲು 150 ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 15 ಅತ್ಯುತ್ತಮ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಾಲೆಯಲ್ಲಿ ಉತ್ತಮ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ನೀಡಲಾಗುವುದು. ಅವರಲ್ಲಿ ಉತ್ತಮ ಮೌಲ್ಯ ತುಂಬಲಾಗುವುದು. ಅವರಲ್ಲಿ ಜ್ಞಾನದ ಜತೆಗೆ ಉತ್ತಮ ಗುಣವನ್ನು ತುಂಬುತ್ತೇವೆ ಎಂದರು.

ಈ ಸಂದರ್ಭ ವಿದ್ಯಾಂಸ್ಥೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಬಿಎಸ್‌ಎಸ್ ವಿದ್ಯಾದಯ ಕಾರ್ಯಾಧ್ಯಕ್ಷ ಬಿ. ಶ್ರೀನಿವಾಸ್, ಕಾರ್ಯದರ್ಶಿ ಆರ್. ವಾಸುದೇವ್ ಭಟ್, ಖಜಾಂಚಿ ಎಚ್.ಟಿ. ಸ್ವರ್ಣ ಕುಮಾರ್, ಟ್ರಸ್ಟಿಗಳಾದ ಪದ್ಮಜಾ ಶ್ರೀನಿವಾಸ್, ವಂದನಾ ಗೋವಿಂದಕೃಷ್ಣ, ಕೆ.ಎಸ್. ಗುರುರಾಜ, ಎಚ್. ಮುರಳೀಧರ್ ಭಟ್, ಅಪರ್ಣ ಶ್ರೀನಿವಾಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net