

ಮಡಿಕೇರಿ:
ಮಡಿಕೇರಿ ಕಾವೇರಿ ಹಾಲ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ವಿಶೇಷ ಕಾರ್ಯಕಾರಿಣಿ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶ ತುಂಡು ಮಾಡುತ್ತೇವೆ ಎಂದು ಹಿಂದೆ ಉಗ್ರರು ಹೇಳುತ್ತಿದ್ದರು. ಈಗ ಕಾಂಗ್ರೆಸ್ ಸಂಸದರೇ ಹೇಳುವಂತಾಗಿದೆ. ದೇಶ ವಿಭಜನೆ ಮಾಡುವ ಕಾಂಗ್ರೆಸ್‌ನ ಒಟ್ಟು ಭಾವನೆಯನ್ನು ಡಿ.ಕೆ. ಸುರೇಶ್ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆ ಭಾರತ ಒಡೆಯುವವರು ಮತ್ತು ಭಾರತ ಒಗ್ಗೂಡಿಸುವವರ ನಡುವೆ ನಡೆಯುವ ಚುನಾವಣೆಯಾಗಿದೆ. ಹನುಮ ಭಕ್ತರು ಮತ್ತು ಟಿಪ್ಪು ಭಕ್ತರ ನಡುವೆ ನಡೆಯುವ ಚುನಾವಣೆ ಆಗಿದೆ. ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಕಾಂಗ್ರೆಸ್ ಹೇಳಿತ್ತು. ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್‌ಗೆ ಬಂದಿದ್ದರು. ಆದರೆ ಈಗ ಅವರೂ ಜೈ ಶ್ರೀರಾಮ್ ಘೋಷಣೆ ಕೂಗುವಂಥ ಪರಿಸ್ಥಿತಿ ನಿರ್ಮಾಣ ಆಗಿದೆ.
ದೇಶಕ್ಕೆ ಸಡ್ಡು ಹೊಡೆಯುವ ಭಯೋತ್ಪದಕರು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರು. ಅಲ್ಲಿ ೩೭೦ ವಿಧಿ ರದ್ದಾದ ನಂತರ ಕಾಶ್ಮೀರ ಶಾಂತವಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ ಬಂದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸೂ ಈಡೇರಿದೆ. ಯುದ್ಧ ಮಾಡುವಾಗ ಮದ್ದು ಗುಂಡು ಇಲ್ಲದ ಸ್ಥಿತಿ ಹಿಂದೊಮ್ಮೆ ಭಾರತೀಯ ಸೈನಿಕರದ್ದಾಗಿತ್ತು. ಆದರೆ ಈಗ ಚೀನಾವನ್ನು ಎದುರಿಸುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ ಇದೆ. ಒಂದು ಕಾಲದಲ್ಲಿ ಭಾರತ ಚಿನ್ನವನ್ನು ಅಡವಿಡುವಂತೆ ಆಗಿತ್ತು. ಈಗ ಜಗತ್ತಿನ ೫ ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಭಾರತ ಇದೆ. ಇನ್ನು ೧೦ ವರ್ಷದಲ್ಲಿ ಭಾರತ ಅತ್ಯಂತ ಬಲಿಷ್ಠ ದೇಶ ಆಗಲಿದೆ. ಈಗಿನ ಈ ಅಭಿವೃದ್ಧಿ ಇದೇ ರೀತಿ ಮುಂದುವರಿಯಬೇಕು. ಇದಕ್ಕಾಗಿ ಲೋಕಸಭೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಮತ್ತಷ್ಟು ಬೆಳೆಯಬೇಕು ಎಂದು ಪ್ರತಿಪಾದಿಸಿದರು.
ಜನರ ದುರಾದೃಷ್ಟಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆಡಳಿತಕ್ಕೆ ಬಂದು ೮ ತಿಂಗಳು ಆದರೂ ಕಾಂಗ್ರೆಸ್ ಶಾಸಕರಿಗೇ ೮ ಮೀಟರ್ ರಸ್ತೆ ಮಾಡಿಸಲು ಆಗಿಲ್ಲ. ಮುಂದೆ ಬೀಕರ ಬರ ಬರಲಿದೆ. ಕುಡಿಯುವ ನೀರಿನ ಸಮಸ್ಯೆ ಕಾಣಿಕೊಳ್ಳಲಿದೆ. ಇದಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ. ರೈತರ ಸಂಕಷ್ಟ ಪರಿಹಾರಕ್ಕೆ ರಾಜ್ಯ ಸರ್ಕಾರ ೧೦ ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಂತರ ಎಲ್ಲರೂ ಸೇರಿ ಹೆಚ್ಚಿನ ಸಹಾಯ ಕೋರಿ ಕೇಂದ್ರ ಸರ್ಕಾರದ ಬಳಿ ಹೋಗೋಣ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಇದು ಭಾರತದ ಅಮೃತ ಕಾಲಕ್ಕೆ ಹೋಗುವ ಸಮಯ. ೨೦೪೭ ರ ಕಾಲಘಟ್ಟದಲ್ಲಿ ವಿಕಸಿತ ಭಾರತದತ್ತ ಕೊಂಡೊಯ್ಯುವ ಬಜೆಟ್ ವಿತ್ತ ಸಚಿವರು ಮಂಡಿಸಿದ್ದಾರೆ. ಭಾರತವನ್ನು ವಿಶ್ವ ಬೆರಗು ಕಣ್ಣಿನಲ್ಲಿ ನೋಡುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ತಮ್ಮ ದೇಶ ಒಡೆಯುವ ಮಾತಾಡಿದ್ದಾರೆ. ಇಂಥ ಮನಸ್ಥಿತಿ ವಿರುದ್ಧ ಬಿಜೆಪಿ ಹೋರಾಟ ಇರುತ್ತದೆ. ಭಾರತ್ ಜೋಡೋ ಎಂದು ನಾಟಕ ಮಾಡುವರು ಮತ್ತು ನೈಜವಾಗಿ ಭಾರತ ಕಟ್ಟುವವರ ನಡುವೆ ಮುಂದಿನ ಚುನಾವಣೆ ನಡೆಯಲಿದೆ ಎಂದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ’ಹಿಂದಿನ ಬಿಜೆಪಿ ಶಾಸಕರು ಕಡಿದು ಕಟ್ಟೆಹಾಕಿದ್ದು ಏನು?’ ಎಂದು ಕಳೆದ ವಾರ ಕೊಡಗಿಗೆ ಆಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಲು ಈ ಕಾರ್ಯಕ್ರಮ ಬಳಸಿಕೊಂಡ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ನಾವು ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆಗೆ ಸಿದ್ಧವಾಗಿರುವುದಾಗಿ ಸವಾಲು ಹಾಕಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ೩ ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಕಾಮಗಾರಿಗಳು ನಾವು ಪ್ರಸ್ತಾವನೆ ಕಳಿಸಿದ ನಂತರ ಮಂಜೂರಾದ ಕಾಮಗಾರಿಗಳು. ಕೊಡಗಿಗೆ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಸೈನಿಕ ಶಾಲೆ, ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿದ್ದು ನಾವು ಎಂದರು. ಕೊಡಗು ವಿಶ್ವವಿದ್ಯಾಲಯದಲ್ಲಿ ನೇಮಕ ಮಾಡಿಕೊಳ್ಳಲಾಗಿರುವ ತಾತ್ಕಾಲಿಕ ಸಿಬ್ಬಂದಿಯನ್ನು ಬಿಜೆಪಿ ಅವಧಿಯಲ್ಲಿ ನೇಮಕವಾದವರು ಎನ್ನುವ ಕಾರಣಕ್ಕೆ ಕೆಲಸ ಬಿಡಿಸಲಾಗಿದೆ. ಇತರ ಇಲಾಖೆಗಳಲ್ಲೂ ಇಂಥದ್ದೇ ಕಾರಣಕ್ಕೆ ಹಲವರನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಆರೋಪಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ನೂತನ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಹುದೊಡ್ಡ ಜವಾಬ್ದಾರಿ ವಹಿಸಲಾಗಿದೆ. ಎಲ್ಲರ ಸಹಕಾರದಿಂದ ಈ ಜವಾಬ್ದಾರಿ ನಿರ್ವಹಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಮತದಾರರ ಮನೆಮನೆಗೆ ತಲುಪಿಸುವಲ್ಲಿ ಆದ್ಯತೆ ನೀಡಲಾಗುವುದು ಎಂದರು.
ವಿಧಾನ ಪರಿಷತ್ತು ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ನಿಕಪೂಟಪೂರ್ವ ಅಧ್ಯಕ್ಷ ರಾಬಿನ್ ದೇವಯ್ಯ, ಪಕ್ಷದ ಕೊಡಗು ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ನಗರ ಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಮನು ಮುತ್ತಪ್ಪ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ವೇದಿಕೆಯಲ್ಲಿದ್ದರು.
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ರಾಬಿನ್ ದೇವಯ್ಯ ಅವರಿಂದ ನೂತನ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ನಡೆದ ವಿಶೇಷ ಕಾರ್ಯಕಾರಿಣಿಯಲ್ಲಿ ೨ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಪಕ್ಷದ ಮುಖಂಡ ಬಿ.ಬಿ. ಲೋಕೇಶ್ ಮಂಡನೆ ಮಾಡಿದರು. ಕಾಂಗೀರ ಸತೀಶ್ ಅನುಮೋದನೆ ಪಡೆದುಕೊಂಡರು. ಕೊಡಗಿನ ಪಾರಂಪರಿಕ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕೋರುವ ನಿರ್ಣಯವನ್ನು ಬಿ.ಡಿ. ಮಂಜುನಾಥ್ ಮಂಡನೆ ಮಾಡಿದರು. ಪಕ್ಷದ ವಕ್ತಾರ ಮಹೇಶ್ ಜೈನಿ ಅನುಮೋದನೆ ಪಡೆದುಕೊಂಡರು.