

ವಿಜಯವಾಣಿ ಸುದ್ದಿಜಾಲ ಉಡುಪಿ
ಶತಮಾನದ ಹಿಂದೆಯೇ ಇಲ್ಲಿನ ಹಿರಿಯರೆಲ್ಲ ಒಂದಾಗಿ ದೇವಾಲಯ ನಿರ್ಮಿಸಿ ಸಮಾಜದ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಬಳಿಕ ಅವರೆಲ್ಲರ ಆಶಯದಂತೆ ತಾವುಗಳು ಭಜನಾ ತಂಡ ಕಟ್ಟಿಕೊಂಡು ಹರಿನಾಮ ಸಂಕೀರ್ತನೆ ಆರಂಭಿಸಿದ್ದೀರಿ. ಇದೀಗ 125 ದಿನ ಅಹೋರಾತ್ರಿ ಭಜನಾ ಮಹೋತ್ಸವ ನಡೆಸುತ್ತಿರುವುದು ದೇವರಿಗೆ ಸಂತಸ ತಂದರೆ, ನಿಮಗೆಲ್ಲ ನೆಮ್ಮದಿ ಲಭಿಸಲಿದೆ ಎಂದು ಕಾಶೀ ಮಠ ಸಂಸ್ಥಾನದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ತೆಂಕುಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶತಮಾನೋತ್ತರ ರಜತ ಮಹೋತ್ಸವ ಆಚರಣೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ 125 ದಿನಗಳ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಭಜನಾ ಮಹೋತ್ಸವದ ಸಂಯೋಜಕ ಮಟ್ಟಾರ್ ಸತೀಶ್ ಕಿಣಿ ಮಾತನಾಡಿ, 125 ದಿನಗಳ ಕಾಲ ನಡೆಯುವ ಭಜನಾ ಮಹೋತ್ಸವದಲ್ಲಿ ಪ್ರತಿ ಎರಡು ಗಂಟೆಗೆ ಒಂದೊಂದು ತಂಡ ರಚಿಸಿ ಸಮಯ ನಿಗದಿ ಮಾಡಲಾಗಿದೆ. 250ಕ್ಕೂ ಹೆಚ್ಚು ಸಂಗೀತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಊರಿನ ಹಾಗೂ ಪರವೂರಿನ ನೂರಾರು ಭಜನಾ ತಂಡಗಳೂ ಭಾಗಿಯಾಗಲಿವೆ. ಪ್ರತಿ ಭಾನುವಾರ ಸಂಜೆ ನಗರ ಭಜನೆ ನಡೆಯಲಿದೆ ಎಂದು ತಿಳಿಸಿದರು.
ದೇವಳದ ವತಿಯಿಂದ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭದ ಮೂಲಕ ಸ್ವಾಗತಿಸಿ, ಪಾದಪೂಜೆ ನೆರವೇರಿಸಿ, ಫಲ-ಪುಷ್ಪ, ಕಾಣಿಕೆ ಸಮರ್ಪಿಸಲಾಯಿತು. ಶ್ರೀಗಳು ಶ್ರೀಲಕ್ಷ್ಮೀ ವೆಂಕಟೇಶ ದೇವರಿಗೆ, ಭಜನಾ ಮೊಹೋತ್ಸವದ ಶ್ರೀ ವಿಠೋಬಾ ರುಖುಮಾಯಿ ದೇವರಿಗೆ ಆರತಿ ಬೆಳಗಿಸಿ ಮಹಾಪೂಜೆ ನೆರವೇರಿಸಿದರು.
ದೇವಳದ ಪ್ರಧಾನ ಅರ್ಚಕ ದಯಾನ್ ಭಟ್, ವೇದಮೂರ್ತಿ ಚೇಂಪಿ ಶ್ರೀಕಾಂತ್ ಭಟ್ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನ ನೆರವೇರಿತು. ವೇದಮೂರ್ತಿ ರಾಮಚಂದ್ರ ಭಟ್, ವಿನಾಯಕ್ ಭಟ್, ದೇವಳದ ಮೊಕ್ತೇಸರ ಪಿ.ವಿ. ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ವಿಶ್ವನಾಥ್ ಭಟ್, ವಸಂತ್ ಕಿಣೆ, ಪುಂಡಲೀಕ್ ಕಾಮತ್, ಶಾಂತಾರಾಮ್ ಶೆಣೈ, ಗಣೇಶ್ ಕಿಣಿ, ಉಮೇಶ್ ಪೈ, ಕೈಲಾಸನಾಥ ಶೆಣೈ, ಪ್ರಮುಖರಾದ ವಿಶಾಲ್ ಶೆಣೈ, ವಿವೇಕ್ ಶಾನಭೋಗ್, ಡಾ. ವಿನಾಯಕ್ ಶೆಣೈ, ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿಎಸ್ಬಿ ಯುವಕ/ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ನಮ್ಮ ಗುರುಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನೂರಾರು ಮನೆಗಳಲ್ಲಿ ಘರ್ ಘರ್ ಭಜನಾ ಆರಂಭಿಸಿರುವುದು ಸಂತಸ ತಂದಿದೆ. ತಮಗೆಲ್ಲರಿಗೂ ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ಇರಲಿ. | ಸಂಯಮೀಂದ್ರ ತೀರ್ಥ ಶ್ರೀಪಾದರು. ಕಾಶೀ ಮಠ