

ಬೆಳ್ತಂಗಡಿ: ಕೇವಲ 7 ಹಾಸಿಗೆ ಮತ್ತು ಇಬ್ಬರು ವೈದ್ಯರು ಹಾಗೂ ಬ್ಬರು ದಾದಿಯರಿಂದ ಎರಡು ದಶಕಗಳ ಹಿಂದೆ ಪ್ರಾರಂಭವಾದ ಬೆನಕ ಆಸ್ಪತ್ರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸೇವೆಯನ್ನು ಹಂತಹಂತವಾಗಿ ವಿಸ್ತರಿಸುತ್ತಾ ಇದೀಗ 130 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನೊಳಗೊಂಡ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಹೇಳಿದರು.
ಗುರುವಾರ ಬೆನಕ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಜತ ಸಂಭ್ರಮದಲ್ಲಿರುವ ಆಸ್ಪತ್ರೆ ಗುಣಮಟ್ಟದ ಸೇವೆ ನೀಡುತ್ತಿದೆ. ನಮ್ಮ ಪ್ರತಿಯೊಂದು ಹೆಜ್ಜೆಯ ಆಶಯದಂತೆ ಈ ಪ್ರದೇಶದಲ್ಲೇ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆ ರೋಗಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಹೊಸ ಸೇವೆ ಆರಂಭಿಸುತ್ತಾ ಬಂದಿದ್ದೇವೆ ಎಂದರು.
ಜ.18ರಂದು ರಜತ ಸಂಭ್ರಮ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ವಿಸ್ತೃತ ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್, ತುರ್ತು ಚಿಕಿತ್ಸಾ ವಿಭಾಗವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡೇ-ಕೇರ್ ವಿಭಾಗವನ್ನು ಶಾಸಕ ಹರೀಶ್ ಪೂಂಜ, ಮಕ್ಕಳ ವಾರ್ಡನ್ನು ಅರೆವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಯು.ಟಿ.ಇಫ್ತೀಕರ್ ಅಲಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ್ ಕಾರಂತ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು ಭಾಗವಹಿಸಲಿದ್ದಾರೆ. ಸೀತಾರಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಜಿ.ಕೆ, ಡಾ.ಆದಿತ್ಯ ರಾವ್, ಡಾ.ಅಂಕಿತಾ ಜಿ.ಭಟ್, ಡಾ.ರೋಹಿತ್ ಜಿ.ಭಟ್ , ಬೆನಕ ಪಬ್ಲಿಕ್ ರಿಲೇಶನ್ ಆಫೀಸರ್ ಎಸ್.ಜಿ.ಭಟ್ ಉಪಸ್ಥಿತರಿದ್ದರು.
ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು
ಬೆನಕ ಹೆಲ್ತ್ ಕೇರ್ ಸೇವೆ, ಬೆನಕ ಸಭಾಭವನ, ಅತ್ಯಾಧುನಿಕ ಗ್ಯಾಸ್ಟ್ರೋ ಎಂಡೋಸ್ಕೋಪಿಕ್ ಉಪಕರಣ, ಆಧುನಿಕ ಆಲ್ಟ್ರಾ ಸೌಂಡ್ ಮತ್ತು ಡಿಜಿಟಲ್ ಎಕ್ಸ್ರೇ, ಸಿ.ಟಿ.ಸ್ಕಾೃನ್, ತುರ್ತು ಚಿಕಿತ್ಸಾ ವಿಭಾಗ, ಅತ್ಯಾಧುನಿಕ ಅಪರೇಷನ್ ಥಿಯೇಟರ್, ತೀವ್ರ ನಿಗಾ ಘಟಕ, ಮೈಕ್ರೊ ಸರ್ಜರಿ ಸೇವೆ, ಕೀಹೋಲ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಸಮಕಾಲೀನ ಚಿಕಿತ್ಸೆಯ ಬದ್ಧತೆ, ಸ್ಪೆಷಾಲಿಟಿ ಸೇವೆಗಳು, ವಿಮಾ ಸೌಲಭ್ಯ, ಆರೋಗ್ಯ ಶಿಬಿರಗಳು, ಸುಸಜ್ಜಿತ ತುರ್ತು ಚಿಕಿತ್ಸಾ ಘಟಕ, ಮಕ್ಕಳ ಸ್ನೇಹಿ ವಾರ್ಡ್, ವಿಶಾಲವಾದ ಕ್ಯಾಂಟೀನ್, ಮನೋಲ್ಲಾಸ ನೀಡುವ ವಿನ್ಯಾಸಗಳಿವೆ ಎಂದು ಡಾ.ಗೋಪಾಲಕೃಷ್ಣ ತಿಳಿಸಿದರು.