ಬಾಸ್ಕೆಟ್ ಬಾಲ್ ಕ್ರೀಡಾಂಗಣ ಉದ್ಘಾಟನೆ

Inauguration of Basketball Stadium
Published on

ವಿರಾಜಪೇಟೆ:

ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜತೆಗೆ ಕ್ರೀಡೆಗೂ ಹೆಚ್ಚು ಪ್ರಾಮುಖ್ಯತೆ ನೀಡಿದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢ ಜೀವನ ಸಾಗಿಸಬಹುದು ಎಂದು ವಿರಾಜಪೇಟೆ ಶಾಸಕರೂ ಆಗಿರುವ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಇಲ್ಲಿನ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರಗತಿ ಕೀಡಾ ಅಕಾಡೆಮಿ ವತಿಯಿಂದ ಶಾಲ ಆವರಣದಲ್ಲಿ ನಿರ್ಮಿಸಿರುವ ಬಾಸ್ಕೆಟ್ ಬಾಲ್ ಕ್ರೀಡಾಂಗಣ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಪೊಷಕರು ತಮ್ಮ ಮಕ್ಕಳಿಗೆ ಕಲಿಕೆಗೆ ಒತ್ತಡ ಹಾಕುವಂತೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುವಂತಾಗಬೇಕು. ಕಲಿಕೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶರೀರ ಮತ್ತು ಮನಸ್ಸು ಸುಸ್ಥಿತಿಯಲ್ಲಿರುತ್ತದೆ. ಒತ್ತಡಗಳು ನಿವಾರಣೆಯಾಗುತ್ತದೆ ಎಂದರು.

ಅಂತರ್ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಮಾಜಿ ಆಟಗಾರ್ತಿ ಡಾ. ಪುಷ್ಪಾ ಕುಟ್ಟಣ್ಣ ಮಾತನಾಡಿ ಈ ಹಿಂದೆ ಜಿಲ್ಲೆಯಲ್ಲಿ ಕ್ರೀಡೆಗಳಿಗೆ ಪೂರಕವಾದ ಸುಸಜ್ಜಿತ ಕ್ರೀಡಾಂಗಣ ಕೊರತೆ ಇತ್ತು. ಕ್ರೀಡಾ ಪಟುಗಳು ಸನೀಹದ ಜಿಲ್ಲೆಗಳನ್ನು ಆಶ್ರಯಿಸುತಿದ್ದರು. ಇದೀಗ ಜಿಲ್ಲೆಯಲ್ಲಿ ಕೆಲವು ಸಂಸ್ಥೆಗಳು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿ ಕ್ರೀಡಾ ಪಟುಗಳನ್ನು ತಯಾರು ಮಾಡುತ್ತಿವೆ. ಕ್ರಿಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಶಿಸ್ತಿನಿಂದ ಕಲಿತಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಅರಸಿ ಬರುತ್ತದೆ ಎಂದು ಹೇಳಿದರು.

ಪ್ರಗತಿ ಶಾಲೆಯ ಆಡಳಿತಾಧಿಕಾರಿಯೂ ಆದ ಅಂತರ್ ರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ ಕೊಡಗು ಕ್ರೀಡೆಗೆ ಹೆಸರುವಾಸಿಯಾಗಿದ್ದರೂ ಕ್ರೀಡಾಪಟುಗಳಿಗೆ ಸುಸಜ್ಜಿತವಾದ ಕ್ರೀಡಾಂಗಣ ಮತ್ತು ಮೂಲಭೂತ ಸೌಕರ್ಯ ಒದಗಿಸಲು ವಿಫಲತೆಯನ್ನು ಕಂಡಿದ್ದೇವೆ. ಕ್ರೀಡಾ ಕ್ಷೇತ್ರದಲ್ಲಿ ಹಲವು ಮಾದರಿಯ ಕ್ರೀಡೆಗಳಿವೆ. ನಿರ್ಧಿಷ್ಟವಾದ ಕ್ರೀಡೆಯಲ್ಲಿ ಆಸಕ್ತಿಯಿದ್ದರೂ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿ ಆಗಿಲ್ಲ ಎಂದರು.
ಪ್ರಗತಿ ಶಾಲೆಯ ಸಂಸ್ಥಾಪಕ ಮಾದಂಡ ಪೂವಯ್ಯ, ಪುರಸಭೆ ಸದಸ್ಯೆ ದೇಚಮ್ಮ ಕಾಳಪ್ಪ, ಮಂಡೆಪಂಡ ಕುಟ್ಟಣ್ಣ, ಬಿಇಒ ಪ್ರಕಾಶ್, ಬಾಸ್ಕೆಟ್ ಬಾಲ್ ತರಬೇತುದಾರ ಇರ್ಷಾದ್ ಇದ್ದರು.

ಅಂತರ್ ರಾಷ್ಟ್ರೀಯ ಬಾಸ್ಕೇಟ್ ಬಾಲ್ ಜೂನಿಯರ್ಸ್‌ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟು ಪರದಂಡ ಬೋಪಣ್ಣ ಮತ್ತು ಬಾಸ್ಕೆಟ್ ಬಾಲ್ ತರಬೇತುದಾರ ಇರ್ಷಾದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕ್ರ್ರೀಡಾಂಗಣ ಉದ್ಘಾಟನೆ ವೇಳೆ ವಿರಾಜಪೇಟೆ ಬಾಸ್ಕೆಟ್ ಬಾಲ್ ಕ್ಲಬ್, ಮಡಿಕೇರಿ ಸ್ಪಟನ್ಸ್, ಪೊನ್ನಂಪೇಟೆ ನೈಟ್ಸ್, ಮೈಸೂರು ಮೇವರಿಕ್ಸ್ ತಂಡಗಳ ಮಧ್ಯೆ ಪ್ರದರ್ಶನ ಪಂದ್ಯಾಟಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net