ಹುಬ್ಬಳ್ಳಿಯಲ್ಲಿ ಬ್ಯಾಂಕರ್ಸ್ ಭವನ ಉದ್ಘಾಟನೆ

bankars building innogaration
Published on

ಹುಬ್ಬಳ್ಳಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬ್ಯಾಂಕ್​ಗಳು ಸೇರಿ ವಿವಿಧೆಡೆ ಕೆಲಸ ಮಾಡುವವರಿಗೆ ಒತ್ತಡ ಜಾಸ್ತಿ ಆಗುತ್ತಿದೆ. ಇದರಿಂದ ಮುಕ್ತಿ ಪಡೆಯಲು ಎಲ್ಲರೂ ಒಂದೆಡೆ ಸೇರಿ ಮನಸ್ಸಿಗೆ ಮುದ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ವಿದ್ಯಾನಗರ ಅಕ್ಷಯ ಕಾಲನಿಯಲ್ಲಿ ಬ್ಯಾಂಕರ್ಸ್ ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ್ದ ಬ್ಯಾಂಕರ್ಸ್ ಭವನ ಉದ್ಘಾಟನೆ ಸಮಾರಂಭದಲ್ಲಿ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಬ್ಯಾಂಕ್​ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ಯಾಂಕ್ ಸಿಬ್ಬಂದಿ ಸದಾ ಉತ್ಸಾಹದಿಂದ ಕೆಲಸ ಮಾಡಬೇಕಾದರೆ ಯೋಗ, ವ್ಯಾಯಾಮದಂತಹ ಚಟುವಟಿಕೆಗಳಿಗೂ ಮಹತ್ವ ನೀಡಬೇಕು. ಇದು ಮನೋರಂಜನೆಯ ತಾಣವಾಗಬೇಕು ಎಂದು ಸಲಹೆ ನೀಡಿದರು.

ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಎಂ. ವಿಜಯಕುಮಾರ, ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಗದೀಶ ಮಠದ, ಸುರೇಶ ಎಂಟರಪ್ರೖೆಸಸ್ ಎಂಡಿ ಸುರೇಶ ಶೇಜವಾಡಕರ, ಆರ್. ಸತೀಶ, ಬಸಂತಕುಮಾರ ಪಾಟೀಲ, ಎಂ.ವಿ. ಕರಮರಿ, ಬಸವರಾಜ ಅಳಗವಾಡಿ, ಗೋವಿಂದರಾಜು, ಗೋವಿಂದ ಜೋಶಿ, ಬಾಪುಗೌಡ ಬಿರಾದಾರ ಇತರರು ಭಾಗವಹಿಸಿದ್ದರು.

ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಾ. ಡಿ.ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಪರ್ವತಿಕರ ಸ್ವಾಗತಿಸಿದರು. ಬಸವರಾಜ ಗುರ್ಕಿ ಪರಿಚಯಿಸಿದರು.

ಶ್ಲಾಘನೀಯ ಕಾರ್ಯ

ಭವನದ ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಸಂಘಟನೆ ಮುಖ್ಯವಾಗಿದೆ. ಬ್ಯಾಂಕ್ ಅಧಿಕಾರಿಗಳು ಒಂದಾಗಿ ಸ್ವಂತ ಖರ್ಚಿನಲ್ಲಿ ಭವನ ನಿರ್ವಿುಸಿರುವುದು ಶ್ಲಾಘನೀಯ ಕಾರ್ಯ. ಬ್ಯಾಂಕ್ ಕೆಲಸ ಎಂದರೆ ಅದು ಸುಲಭವಲ್ಲ. ಹತ್ತಾರು ಟೆನ್ಶನ್ ಇರುತ್ತವೆ. ಜನರಿಗೆ ಉತ್ತಮ ಸೇವೆ ನೀಡಲು ಸಿಬ್ಬಂದಿ ನಿತ್ಯವೂ ಹೆಣಗಾಡುತ್ತಾರೆ. ಹಾಗಾಗಿ ವಾರದಲ್ಲಿ ಒಂದು ದಿನ ಮನೋರಂಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಭವನದ ಕಾರ್ಯ ಚಟುವಟಿಕೆಗಳಿಗೆ ಅಗತ್ಯವಾದರೆ ಶಾಸಕರ ನಿಧಿಯಿಂದ ಹಣ ಒದಗಿಸಲು ತಾವು ಸಿದ್ಧ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net