ಮಾನಸಿಕ ಒತ್ತಡದಿಂದ ಪಾರಾಗಲು ಕ್ರೀಡಾಕೂಟ ಸಹಕಾರಿ...

Sports Lead
Published on

ನ್ಯಾಯಮೂರ್ತಿ ವಿ.ಕಾಮೇಶ್ವರ್​ ರಾವ್​ ಅಭಿಪ್ರಾಯ

ವಕೀಲರ ರಾಜ್ಯಮಟ್ಟದ ಕ್ರೀಡಾಕೂಟ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೋರ್ಟ್​ನಲ್ಲಿ ವಕಾಲತು ಮಾಡುವಾಗ ಪ್ರಕರಣಕ್ಕೆ ಸಂಬಂಧಿಸಿ ವಕೀಲರು ಹಾಗೂ ನ್ಯಾಯದಾನಕ್ಕೆ ಸಂಬಂಧಿಸಿ ನ್ಯಾಯಾಧೀಶರು ಹೆಚ್ಚಿನ ಚಿಂತನೆಗೆ ಒಳಪಡುವುದರಿಂದ ಮಾನಸಿಕವಾಗಿ ಒತ್ತಡ ಅನುಭವಿಸುತ್ತಾರೆ. ಅದರಿಂದ ಪಾರಾಗಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗೂ ಹೈಕೋರ್ಟ್​ ನ್ಯಾಯಮೂರ್ತಿ ವಿ.ಕಾಮೇಶ್ವರ್​ ರಾವ್​ ಅಭಿಪ್ರಾಯಪಟ್ಟರು.

ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಉಡುಪಿಯ ಎಂಜಿಎಂ ಮೈದಾನದಲ್ಲಿ ಮಾ.1ರಂದು ಸಂಜೆ ಆಯೋಜಿಸಿದ್ದ ಎರಡು ದಿನದ ರಾಜ್ಯಮಟ್ಟದ ಹೊನಲು-ಬೆಳಕಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ, ದೈಹಿಕ ಸಬಲತೆ

Sports- 3
ಹೈಕೋರ್ಟ್​ ನ್ಯಾಯಾಧೀಶ ರಾಜೇಶ್​ ರೈ ಕೆ. ಮಾತನಾಡಿ, ಸಮಾನತೆ, ಸಾಮಾಜಿಕ ಹಕ್ಕು ಹಾಗೂ ನ್ಯಾಯದಾನಕ್ಕಾಗಿ ವಕೀಲರು ವಾದ-ವಿವಾದಗಳ ಮೂಲಕ ನ್ಯಾಯಿಕ ಹೋರಾಟ ನಡೆಸುತ್ತಾರೆ. ಅಂತಹ ಕಲಾಪಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಕ್ರೀಡೆ ಸಹಕಾರಿಯಾಗುತ್ತದೆ. ಅಲ್ಲದೆ, ಉತ್ತಮ ಆರೋಗ್ಯ, ದೈಹಿಕ ಸಬಲತೆ ಲಭಿಸುತ್ತದೆ ಎಂದರು.
Sports- 5
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್​. ರಘುನಾಥ್​, ಮಾಹೆ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣವರ್​, ವಕೀಲರ ಸಂಘದ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರಕುಮಾರ್​ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ವಕೀಲ ವಿಜಯಕುಮಾರ್​ ಶೆಟ್ಟಿ ನಾಡಗೀತೆ ಹಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವೀಣಕುಮಾರ್​ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್​ ಎ.ಆರ್​. ವಂದಿಸಿದರು. ಹಿರಿಯ ವಕೀಲೆ ಮೇರಿ ಎ.ಆರ್​. ಶ್ರೇಷ್ಠಾ ಕಾರ್ಯಕ್ರಮ ನಿರೂಪಿಸಿದರು.

 ಪಂದ್ಯಗಳಿಗೆ ಚಾಲನೆ

ಸಭಾ ಕಾರ್ಯಕ್ರಮದ ಬಳಿಕ ಕ್ರಿಕೆಟ್​, ವಾಲಿಬಾಲ್​, ಥ್ರೋಬಾಲ್​ ಹಾಗೂ ಶಟಲ್​ ಬ್ಯಾಡ್ಮಿಂಟನ್​ ಪಂದ್ಯಗಳಿಗೆ ನ್ಯಾಯಾಧೀಶರು ತ್ರಿವರ್ಣದ ಬಲೂನ್​ ಹಾರಿಬಿಡುವ ಮೂಲಕ ಚಾಲನೆ ನೀಡಿದರು.

ಉಡುಪಿ ವಕೀಲರ ಸಂಘ ಮಾದರಿ

Sports- 4
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್​.ಇಂದಿರೇಶ್​ ಮಾತನಾಡಿ, ಕ್ರೀಡಾಕ್ಷೇತ್ರದಲ್ಲಿ ಯಾರು ಹೆಚ್ಚು ಶ್ರಮ ವಹಿಸಿ, ಏಕಾಗ್ರತೆಯಿಂದ ಆಟವಾಡುತ್ತಾರೋ ಅವರು ಗೆಲುವು ಸಾಧಿಸುತ್ತಾರೆ. ಅದೇ ರೀತಿ ನ್ಯಾಯಾಂಗ ವ್ಯವಸ್ಥೆಯಲ್ಲೂ ಸಹ ಯಾರು ಶ್ರಮವಹಿಸಿ ವಕಾಲತು ನಡೆಸುತ್ತಾರೋ ಅವರಿಗೆ ಸಾಮಾಜಿಕ ನ್ಯಾಯವೆಂಬ ಗೆಲುವು ಲಭಿಸುತ್ತದೆ. ಲೋಕ ಅದಾಲತ್​, ಕಾನೂನು ಕಾರ್ಯಾಗಾರದಂತಹ ಕಾರ್ಯಕ್ರಮಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದ ವಕೀಲರು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಉಡುಪಿ ವಕೀಲರ ಸಂಘ ಮಾದರಿಯಾಗಿದೆ ಎಂದರು.

ಉಡುಪಿಯ ವಕೀಲರ ಸಂಘದಿಂದ ಆಯೋಜನೆಗೊಂಡ ರಾಜ್ಯಮಟ್ಟದ ಈ ಕ್ರೀಡಾಕೂಟ ಮಾದರಿಯಾಗಿದೆ. ಇದು ಇಲ್ಲಿಗೇ ನಿಲ್ಲಬಾರದು. ರಾಜ್ಯದ ಪ್ರತಿಜಿಲ್ಲೆಯಲ್ಲೂ ಪಂದ್ಯಾಟ ಆಯೋಜಿಸುವಂತಾಗಬೇಕು. ಇದರಿಂದ ರಾಜ್ಯ, ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರು, ನ್ಯಾಯಾಧೀಶರ ನಡುವೆಯೂ ಪರಸ್ಪರ ಸಮನ್ವಯ ಹಾಗೂ ಸೌಹಾರ್ದ ಬೆಳೆಯುತ್ತದೆ. | ವಿ.ಕಾಮೇಶ್ವರ್​ ರಾವ್​. ಹೈಕೋರ್ಟ್​ ನ್ಯಾಯಮೂರ್ತಿ ವಕೀಲರಲ್ಲೂ ಕ್ರೀಡಾ ಪ್ರತಿಭೆ ಇದೆಯೆಂದು ತೋರ್ಪಡಿಸಲು ಹಾಗೂ ವಕೀಲರಲ್ಲಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಉಡುಪಿಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ. ಹೊನಲು-ಬೆಳಕಿನ ಕ್ರೀಡಾಕೂಟದಲ್ಲಿ 39 ಕ್ರಿಕೆಟ್​ ತಂಡ, 16 ವಾಲಿಬಾಲ್​ ತಂಡ, 10 ಥ್ರೋಬಾಲ್​ ತಂಡ ಹಾಗೂ 40 ಶಟಲ್​ ಬ್ಯಾಡ್ಮಿಂಟನ್​ ತಂಡ ಭಾಗವಹಿಸಿವೆ. | ರೆನೋಲ್ಡ್​ ಪ್ರವೀಣಕುಮಾರ್​. ಉಡುಪಿ ವಕೀಲರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net