ನ್ಯಾಯಾಲಯದ ಬಗ್ಗೆ ಭಯ ಬೇಡ, ಭರವಸೆ ಇಡಿ

mkg
Published on

ಚನ್ನಗಿರಿ: ಜನಸಾಮಾನ್ಯರಿಗೆ ನ್ಯಾಯಾಲಯಗಳ ಬಗ್ಗೆ ತುಸು ಭಯ ಇರುತ್ತದೆ. ಆದರೆ, ಯಾವುದೇ ಭಯ ಬೇಡ. ಭರವಸೆ, ನಂಬಿಕೆ ಇರಲಿ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ತಿಳಿಸಿದರು.

ಚನ್ನಗಿರಿಯಲ್ಲಿ ಶನಿವಾರ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನ್ಯಾಯಾಲಯಗಳಲ್ಲಿ ಕೆಲ ಪ್ರಕರಣಗಳಲ್ಲಿ ಸೂಕ್ತ ಸಾಕ್ಷಿ ಕೊರತೆಯಿಂದ ನ್ಯಾಯ ಸಿಗದಿರಬಹುದು. ಆದರೆ, ಅಷ್ಟಕ್ಕೆ ಸೋತು ಸುಮ್ಮನಾಗದೇ ಮತ್ತೆ ಪ್ರಯತ್ನ ನಡೆಸಿದಾಗ ಖಂಡಿತಾ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ವಕೀಲರು ಹೆಚ್ಚೆಚ್ಚು ಕಲಾಪ ಮತ್ತು ಪ್ರಕರಣಗಳ ಬಗ್ಗೆ ಅಭ್ಯಾಸ ಮಾಡುತ್ತಿರಬೇಕು. ಓದುವ ಹವ್ಯಾಸ ಅಳವಡಿಸಿಕೊಂಡಿರಬೇಕು. ಆಗ ಮಾತ್ರ ಯಾವುದೇ ಪ್ರಕರಣದ ಬಗ್ಗೆ ಹಲವು ಆಯಾಮಗಳಲ್ಲಿ ಪರಿಶೀಲಿಸಿ ನ್ಯಾಯ ಕೊಡಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಉಚ್ಚನ್ಯಾಯಾಲಯ ನ್ಯಾಯಮೂರ್ತಿ ಜಿ. ಬಸವರಾಜ್ ಮಾತನಾಡಿ, ಸರ್ಕಾರ ಜನರಿಗೆ ಎಲ್ಲ ಭಾಗ್ಯಗಳನ್ನು ಉಚಿತವಾಗಿ ನೀಡಿದೆ. ಅದರಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತಹ ಯೋಜನೆ ಜಾರಿಗೆ ತರಬೇಕು. ಇದರಿಂದ ವ್ಯಾಸಂಗ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನುಕೂಲವಾಗುತ್ತದೆ ಎಂದರು.

ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ನೂತನ ಕಟ್ಟಡಕ್ಕೆ ಗ್ರಂಥಾಲಯ ಮತ್ತು ಲಿಫ್ಟ್ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಉಚ್ಚನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಹೇಮಂತ ಚಂದನಗೌಡರ್, ಹೈಕೋರ್ಟ್ ಮಹಾಲೇಖನಾಧಿಕಾರಿ ಕೆ.ಎಸ್. ಭರತ್‌ಕುಮಾರ್, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಪ್ರಭಾರ ಮುಖ್ಯಅಭಿಯಂತರ ಕೆ.ಜಿ. ಜಗದೀಶ್ ಇದ್ದರು.

ವ್ಯಾಜ್ಯಮುಕ್ತ ಗ್ರಾಮ ನಿರ್ಮಾಣ: ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ರಾಜ್ಯ ರಾಮರಾಜ್ಯ ಆಗಬೇಕಾದರೆ ವ್ಯಾಜ್ಯಮುಕ್ತ ಗ್ರಾಮ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ಆಗುವ ಸಣ್ಣಪುಟ್ಟ ವ್ಯಾಜ್ಯಗಳಿಂದ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿ ತೊಂದರೆ ಅನುಭವಿಸುತ್ತಾರೆ. ನ್ಯಾಯಾಲಯಗಳು ಬಡವರ ಪ್ರಕರಣಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತ್ವರಿತ ನ್ಯಾಯ ನೀಡಬೇಕು ಎಂದರು.
ಕಾನೂನಿನಲ್ಲಿ ಅನೇಕ ಸುಧಾರಣೆಗಳು ಆಗಬೇಕಿದ್ದು, ನ್ಯಾಯಾಲಯದಲ್ಲಿ ಇರುವಂತಹ ಪ್ರಕರಣಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ ಹೊಸ ಯೋಜನೆ ನೀಡುವ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net