

ಯಳಂದೂರು : ಸಮೀಪದ ಹುಲ್ಲೇಪುರ ಗ್ರಾಮದಲ್ಲಿ ಆದಿಶಕ್ತಿ ಗೋಣಹಳ್ಳಿ ಮಾರಮ್ಮತಾಯಿ ದೇಗುಲವನ್ನು ಹೊಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ಇತ್ತೀಚೆಗೆ ಉದ್ಘಾಟನೆ ಮಾಡಲಾಯಿತು.
ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಹಿಂದು ಧರ್ಮದಲ್ಲಿ ವಿವಿಧ ಧಾರ್ಮಿಕ ಆಚರಣೆಗಳಿಗೆ ಮಹತ್ವದ ಅರ್ಥ ಇದೆ. ಎಲ್ಲ ಆಚರಣೆಗಳೂ ವೈಜ್ಞಾನಿಕವಾಗಿರುತ್ತದೆ. ದೇಗುಲಗಳು ನೆಮ್ಮದಿಯ ತಾಣಗಳಾಗಬೇಕು. ನಮ್ಮ ಧರ್ಮದಲ್ಲಿ ತಾಯಿ-ತಂದೆಯನ್ನು ದೇವರಂತೆ ಕಾಣುವ ಆಚಾರವಿದೆ. ಇದನ್ನು ಎಲ್ಲರೂ ಅರಿಯಬೇಕು. ನಮ್ಮ ಪಾಲಕರು ಹಾಗೂ ಗುರುಹಿರಿಯರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಇದಕ್ಕೂ ಮುಂಚೆ ದೇಗುಲಕ್ಕೆ ಕಳಸ ಹೊತ್ತ ಹೆಣ್ಣುಮಕ್ಕಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಹೋಮ, ಹವನಗಳನ್ನು ಆಯೋಜಿಸಲಾಗಿತ್ತು.
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಸರಗೂರು ಮಠದ ಶ್ರೀ ಮಹಾದೇವಸ್ವಾಮೀಜಿ, ಮಂಗಲಗಡಿಯ ಶ್ರೀ ಮಂಜುನಾಥಸ್ವಾಮಿ ಇತರರು ಇದ್ದರು.