

ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣಮಹೋತ್ಸವ ಅಂಗವಾಗಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮಾರುತಿ ಬೆಟ್ಟದಲ್ಲಿ 32 ಅಡಿ ಎತ್ತರದ ಶ್ರೀ ಶಂಕರಾಚಾರ್ಯರ ಭವ್ಯ ಶಿಲಾ ಮೂರ್ತಿಯನ್ನುಲೋಕಾರ್ಪಣೆ ಮಾಡಲಾಯಿತು.
ಶ್ರೀ ಶಂಕರರ ರಜತಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಭವ್ಯ ಶಿಲಾ ಮೂರ್ತಿಯ ಬಳಿ ಇಡಲಾಯಿತು. ಬಳಿಕ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ನೆರವೇರಿಸಿದರು. ನಂತರ ಶ್ರೀ ಶಂಕರಾಚಾರ್ಯರ ರಜತ ಉತ್ಸವ ಮೂರ್ತಿಗೆ ಉಭಯ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಶ್ರೀ ಶಂಕರರ ಭವ್ಯಮೂರ್ತಿಗೆ ಜಲಾಭಿಷೇಕ, ಅಕ್ಷತಾರ್ಚನೆ, ಪುಷ್ಪ್ಪಾರ್ಚನೆ ಮುಂತಾದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮಾರುತಿ ಬೆಟ್ಟದ ಸುತ್ತಮುತ್ತ ಸೇರಿದ್ದ ತಾಲೂಕಿನ ಹಾಗೂ ವಿವಿಧ ಪ್ರದೇಶಗಳ ಭಕ್ತರು, ಕಿರಿಯ ಶ್ರೀಗಳು ಧಾರ್ಮಿಕ ಪ್ರಕ್ರಿಯೆ ನೆರವೇರಿಸುತ್ತಿದ್ದಾಗ ಶ್ರೀ ಶಂಕರಾಚಾರ್ಯರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.
ಪುರೋಹಿತರಿಂದ ಶ್ರೀ ಶಂಕರ ಸ್ತೋತ್ರಗಳ ಪಠಣ, ಶಾರದಾ ಶಂಕರ ಭಕ್ತಮಂಡಳಿ ಹಾಗೂ ಗೀರ್ವಾಣಿ ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ವೇದ-ವಾದ್ಯ ಗೋಷ್ಠಿಗಳು ಕಾರ್ಯಕ್ರಮಕ್ಕೆ ಮೆರುಗು ತಂದವು. ಬಳಿಕ ಶ್ರೀ ಭಗವತ್ಪಾದರ ಶಿಷ್ಯರಾದ ಜಗದ್ಗುರುಗಳಾದ ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಮಲಕಾಚಾರ್ಯ, ತೋಟಕಾಚಾರ್ಯ ಮೂರ್ತಿಗಳು ಹಾಗೂ ಜಗದ್ಗುರು ಶ್ರೀ ವಿದ್ಯಾರಣ್ಯರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಠದ ಆವರಣದಲ್ಲಿ ಅತಿರುದ್ರಯಾಗ ಮತ್ತು ಸಹಸ್ರಚಂಡಿ ಮಹಾಯಾಗದ ಪೂರ್ಣಾಹುತಿ ನೆರವೇರಿತು.