

ಸವಣೂರ: ಹಸಿರು ಕ್ರಾಂತಿಯ ಮೂಲಕ ರಾಷ್ಟ್ರದ 130 ಕೋಟಿ ಜನರಿಗೆ ಆಹಾರ ನೀಡಿ ಹಸಿವನ್ನು ನೀಗಿಸುವ ಕೆಲಸ ಭಾರತದಲ್ಲಿ ಆಗುತ್ತಿದೆ. ಆದರ ಶ್ರೇಯಸ್ಸು ದೇಶದ ರೈತರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಶ್ರಯದಲ್ಲಿ ತಾಲೂಕಿನ ತೊಂಡೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಕೇಂದ್ರ ಸರ್ಕಾರದ 2021-22ನೇ ಸಾಲಿನ ಎನ್ಪಿಡಿಡಿ ಯೋಜನೆ ಅಡಿಯಲ್ಲಿ 3 ಸಾವಿರ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್ ಘಟಕ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಕುಟುಂಬ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕೃಷಿ ಚಟುವಟಿಕೆಯ ಜತೆಗೆ ಉಪ ಕಸಬುಗಳನ್ನು ಅಳವಡಿಸಿಕೊಂಡಾಗ ರೈತ ಅಭಿವೃದ್ಧಿ ಕಾಣಲು ಸಾಧ್ಯ. ಅದಕ್ಕೆ ಪೂರಕವಾಗಿ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ರೈತರ ಬದುಕು ಹಸನಗೊಳಿಸಲು ಅವಶ್ಯಕತೆಗೆ ತಕ್ಕಂತೆ ನೆರವು ನೀಡುವ ಉದ್ದೇಶದಿಂದ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ ಸೌಲಭ್ಯ ಕಲ್ಪಿಸಿ ನೆರವು ನೀಡಲಾಗಿತ್ತು. ಅದರಂತೆ, ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಪ್ರಾರಂಭಿಸಿ ಸುಮಾರು 12 ಲಕ್ಷ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಮೂಲಕ ಶೈಕ್ಷಣಿಕವಾಗಿ ನೆರವು ನೀಡಲಾಗಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಅನುದಾನ ಇಟ್ಟಿಲ್ಲ ಎಂದು ಬೇಸಋ ವ್ಯಕ್ತಪಡಿಸಿದರು.
ಹೈನುಗಾರಿಕೆಗೆ ಉತ್ತೇಜನ ನೀಡಲು ಶಿಗ್ಗಾಂವಿ-ಸವಣೂರ ಕ್ಷೇತ್ರದಲ್ಲಿ ಕಳೆದ ವರ್ಷ 1 ಸಾವಿರ ರೈತರಿಗೆ ಹಸುಗಳನ್ನು ನೀಡಲಾಗಿದೆ. ಪ್ರಸಕ್ತ ವರ್ಷ 5 ನೂರು ಹಸುಗಳನ್ನು ನೀಡಲು ಅನುಮೋದನೆ ನೀಡಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ಅಜೀಮಪೀರ್ ಖಾದ್ರಿ ಮಾತನಾಡಿದರು. ತೊಂಡೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಹಾರುದ್ರಪ್ಪ ಆಲದಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪದಾಧಿಕಾರಿಗಳಾದ ಬಸನಗೌಡ ಮೇಲಿನಮನಿ, ಹನಮಂತಗೌಡ ಭರಮಣ್ಣನವರ, ಡಿ.ಟಿ. ಕಳಸದ, ಜೆ.ಕೆ. ಎರ್ರಿಸ್ವಾಮಿ, ಗ್ರಾಪಂ ಅಧ್ಯಕ್ಷೆ ತಾಹೇರಾಬೀ ಬಾಣಿ, ಸಹಕಾರ ಸಂಘದ ನಿಬಂಧಕಿ ಪುಷ್ಪಾ ಕಡಿವಾಳ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು.