

ನ್ಯಾಮತಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕೆಪಿಎಸ್ ಕಾಲೇಜು ಪ್ರಾಚಾರ್ಯ ವಿ.ಪಿ. ಪೂರ್ಣಾನಂದ ಹೇಳಿದರು.
ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಎನ್‌ಎಸ್‌ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನ ಎನ್ನುವುದು ಒಂದು ಹೋರಾಟ. ಭವಿಷ್ಯದ ಬದುಕು ಹಸನಾಗಲು ಎಲ್ಲರಿಗೂ ಶಿಕ್ಷಣ ಅಗತ್ಯ ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ವಿದ್ಯಾರ್ಥಿಗಳು ರೂಢಿಗತ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿಡಿಸಿ ಸದಸ್ಯ ಎಂ. ಕರಿಬಸಪ್ಪ ಮಾತನಾಡಿ, ಸರ್ಕಾರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ, ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಸಿಡಿಸಿ ಸದಸ್ಯರಾದ ಜಿ. ಮುರುಡಪ್ಪ, ಮಧು, ಬೇಬಿ, ಸಿ.ಎನ್. ಸಂಜು, ಸದಾಶಿವ, ಆರುಂಡಿ ಲಲಿತಾ, ವಿಶಾಲಾಕ್ಷಿ, ಮುಖ್ಯಶಿಕ್ಷಕ ಪುಟ್ಟಪ್ಪ, ಹಿರಿಯ ಸಹ ಶಿಕ್ಷಕ ಸಿದ್ದಪ್ಪ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.