

ವಿಜಯವಾಣಿ ಸುದ್ದಿಜಾಲ ಧಾರವಾಡ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು 1973ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿಯನ್ನು ವಹಿಸಿಕೊಂಡಾಗ ಸಂಸ್ಥೆ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತ್ತು. ಆ ಕಾಲದಲ್ಲಿ ದೂರದ ಧರ್ಮಸ್ಥಳದಿಂದ ಧಾರವಾಡಕ್ಕೆ ಆಗಮಿಸಿ ಸಂಸ್ಥೆಗಳನ್ನು ನಿರ್ವಹಿಸುವುದು ಸವಾಲಿನ ಕಾರ್ಯವಾಗಿತ್ತು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಿದ್ದು ಇದೀಗ ಇತಿಹಾಸ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನೂತನ ಆಡಳಿತ ಮಂಡಳಿಯ 53ನೇ ವರ್ಷಕ್ಕೆ ಪದಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿಯ ಪೇಜಾವರ ಮಠಾಧೀಶರಾಗಿದ್ದ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ರೀಪಾದಂಗಳವರ ವಿನಂತಿಯ ಮೇರೆಗೆ 1973ರ ಅ. 18ರಲ್ಲಿ ಖಾವಂದರು ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಾಗ ಧಾರವಾಡ ಭಾಗ್ಯದ ಬಾಗಿಲನ್ನು ತೆರೆದಂತಾಯಿತು. ಆಗ ಪ್ರೊ. ನ. ವಜ್ರಕುಮಾರ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಿ ಸಂಸ್ಥೆಯ ಬಲವರ್ಧನೆ ಯ ಕಾರ್ಯ ಪ್ರಾರಂಭಿಸಿದರು ಎಂದರು.
ಜೆಎಸ್‌ಎಸ್ 1944ರಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಹುಕ್ಕೇರಿಕರ ರಾಮರಾಯರಿಂದ ಸ್ಥಾಪಿತವಾದ ಸಂಸ್ಥೆ. ಇದರ ನೂತನ ಆಡಳಿತ ಮಂಡಳಿ ವಹಿಸಿಕೊಂಡು ಇದೀಗ 53ನೇ ವರ್ಷಕ್ಕೆ ಪದರ್ಪಣೆ ಮಾಡುತ್ತಿದೆ. ಪೂಜ್ಯರಿಗೆ ಧರ್ಮಸ್ಥಳ ಧರ್ಮಭೂಮಿಯಾದರೆ, ಧಾರವಾಡ ಕರ್ಮಭೂಮಿಯಾಗಿದೆ. ಬಹುಶಃ ಅವರು ಸಂಸ್ಥೆಯನ್ನು ವಹಿಸಿಕೊಳ್ಳದಿದ್ದರೆ ಉತ್ತರ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದೀಗ ಜೆ.ಎಸ್.ಎಸ್ ಸಂಸ್ಥೆಯ ಅಡಿ 25 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 22,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 1,300 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ ಶೈಕ್ಷಣಿಕ ಕಾಶಿ ಎಂಬ ಹೆಸರು ಬರುವಲ್ಲಿ ಪೂಜ್ಯರ ಸಿಂಹಪಾಲಿದೆ ಎಂದರು.
ಪೂಜ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಸಂಸ್ಥೆ ವರ್ಷದಿಂದ ವರ್ಷಕ್ಕೆ ಉತ್ತರೋತ್ತರ ಅಭಿವೃದ್ಧಿ ಕಾಣುತ್ತಿದೆ. ಸಂಸ್ಥೆಯ ಅಧ್ಯಕ್ಷ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಶೀರ್ವಾದ, ಆಡಳಿತ ಮಂಡಳಿ ಸದಸ್ಯರ ಸಹಕಾರ ಮತ್ತು ಸಿಬ್ಬಂದಿಯ ನಿಸ್ವಾರ್ಥ ಸೇವೆಯಿಂದ ಸಂಸ್ಥೆಗಳು ಈ ಮಟ್ಟಕ್ಕೆ ಬೆಳೆಯಲು ಸಹಾಯಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯ ಶ್ರೀಕಾಂತ ಕೆಮ್ತೂರ ಮಾತನಾಡಿ, ಜೆಎಸ್‌ಎಸ್‌ನ 1973ರ ಪರಿಸ್ಥಿತಿ ಹಾಗೂ ಇಂದಿನ ಪರಿಸ್ಥಿತಿ ನೋಡಿದರೆ ಆಶ್ಚರ್ಯ ಹಾಗೂ ಆನಂದವಾಗುತ್ತವೆೆ. ಲಕ್ಷಾಂತರ ಜನರ ಬಾಳಿನ ಆಶಾಕಿರಣವಾಗಿರುವ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.
52 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರನ್ನು ಸನ್ಮಾನಿಸಲಾಯಿತು.
ಮಹಾವೀರ ಉಪಾಧ್ಯೆ ನಿರೂಪಿಸಿದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಡಾ. ಸೂರಜ್ ಜೈನ್ ವಂದಿಸಿದರು. ಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.