ಸೇವೆ ಮಾಡುವುದೇ ಅಲಯನ್ಸ್ ಸಂಸ್ಥೆ ಧ್ಯೇಯ: ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜ ವಿ.ಭೈರಿ ಅಭಿಮತ

Inauguration Ceremony Mandya
Published on

ಮಂಡ್ಯ: ಅಗತ್ಯಯುಳ್ಳವರಿಗೆ ಸೇವೆ ನೀಡುವುದರ ಜತೆಗೆ ಸ್ನೇಹ ಮತ್ತು ನಾಯಕತ್ವ ವೃದ್ದಿಸುವುದೇ ಅಲಯನ್ಸ್ ಸಂಸ್ಥೆ ಧ್ಯೇಯ ಎಂದು ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜ ವಿ.ಭೈರಿ ಹೇಳಿದರು.

ನಗರದ ಸಿಪಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಲಯನ್ಸ್ ನೂತನ ತಂಡಗಳ ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವೈಯಕ್ತಿಕವಾಗಿ ಸಮಾಜಸೇವೆ ಮಾಡಲು ಮುಂದಾದರೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಸಂಘ ಸಂಸ್ಥೆ ಮೂಲಕ ಸೇವೆ ಮಾಡಿದರೆ ಆಹ್ವಾನಿಸಿ, ಪ್ರೋತ್ಸಾಹ ನೀಡುತ್ತಾರೆ. ಅಲಯನ್ಸ್ ಎಂದರೆ ಒಕ್ಕೂಟ, ಒಗ್ಗಟ್ಟು, ಸ್ನೇಹಪರತೆ ಎನ್ನುವ ಭಾವನೆ ಹೆಚ್ಚುತ್ತದೆ ಎಂದು ತಿಳಿಸಿದರು.

ಅಲಯನ್ಸ್ ದೇಸಿ ಸಂಸ್ಥೆ. ಭಾರತದಲ್ಲಿ ಸ್ಥಾಪನೆಯಾಗಿ 16 ವರ್ಷಗಳಾಗಿದ್ದು, 30 ವಿದೇಶಗಳಲ್ಲಿ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ವಿದೇಶಿ ಸಂಸ್ಥೆಗಳ ಬೆಳೆಸುವುದಕಿಂತ ನಮ್ಮ ನೆಲದ ಅಲಯನ್ಸ್ ಸಂಸ್ಥೆಯನ್ನೇ ಬೆಳೆಸಿ ಸೇವಾ ಚಟುವಟಿಕೆ ಮಾಡೋಣ. ಅಂತಾರಾಷ್ಟ್ರೀಯ ಸಂಸ್ಥೆಗೆ ಸದಸ್ಯರಾಗಲು 1.5 ಲಕ್ಷ ರೂ ಶುಲ್ಕ ಪಾವತಿಸಬೇಕು. ಆದರೆ ಅಲಯನ್ಸ್ ಸಂಸ್ಥೆಯಲ್ಲಿ 10 ಸಾವಿರ ರೂ ಕಟ್ಟಿದರೆ ಸಾಕು. ಸಾಕಷ್ಟು ಸೌಲಭ್ಯ, ಸೇವಾ ಚಟುವಟಿಕೆ ಆರಂಭಗೊಂಡು ಅಗತ್ಯಯುಳ್ಳವರಿಗೆ ನೆರವಾಗುತ್ತದೆ. ನಿಮ್ಮ ಸೇವೆ ದೂರದವರಿಗೂ ಲಭ್ಯವಾಗುತ್ತವೆ ಎಂದು ತಿಳಿಸಿದರು.

ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, ಮಂಡ್ಯ ನಗರದ ರೈತಸಭಾಂಗಣದಲ್ಲಿ ಜು.25ರಂದು ರಾಜ್ಯಮಟ್ಟದ ಕೆ.ವಿ.ಶಂಕರಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಳ್ಳುತ್ತಿದೆ. ಅಲಯನ್ಸ್ ಸಂಸ್ಥೆಯ 265 ಜನರು ಸೇರಿ ಮಾಡುತ್ತಿದ್ದೇವೆ. 25 ಸಾವಿರ ರೂ ನಗದು ಪುರಸ್ಕಾರ ನೀಡಿ ಪುರಸ್ಕೃತರನ್ನು ಗೌರವಿಸಲಾಗುತ್ತಿದೆ. ರಾಜ್ಯಮಟ್ಟದ ಕಲಾವಿದರು ಭಾಗಿಯಾಗುತ್ತಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ 1ನೇ ಉಪ ಪ್ರಾಂತಪಾಲ ಎಚ್.ಮಾದೇಗೌಡ, 2ನೇ ಉಪಪ್ರಾಂತಪಾಲ ಕೆ.ಆರ್.ಶಶಿಧರ ಈಚಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಜಾಂಚಿ ರಕ್ಷಿತ್‌ರಾಜ್, ಪ್ರಾಂತೀಯ ಅಧ್ಯಕ್ಷೆ ಕೆ.ಎನ್.ನೀನಾ ಪಟೇಲ್, ವಲಯಾಧ್ಯಕ್ಷ ಆರ್.ಮಹೇಶ್, ನೂತನ ಅಧ್ಯಕ್ಷೆ ಸಿ.ಕೆ.ನವ್ಯಶ್ರೀ, ಎಂ.ಕುಮಾರ್, ಲೋಕೇಶ್, ಶಿಕ್ಷಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ವೈಕುಂಠ ಇತರರಿದ್ದರು. ಇದೇ ಸಂಧರ್ಭದಲ್ಲಿ ಮಂಡ್ಯ ಶಿಕ್ಷಕ ಅಲಯನ್ಸ್ ಸಂಸ್ಥೆ ಲೋಕಾರ್ಪಣೆಗೊಂಡಿತು. ವಿವಿಧ ಸರ್ಕಾರಿ ಶಾಲೆಗಳಿಗೆ ವಿಶೇಷ ಸಮವಸ್ತ ಮತ್ತು ಆಂಗ್ಲ ಶಬ್ಧಕೋಶವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net