ವಿವಿಧ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ

bumi puje
Published on

ಮಡಿಕೇರಿ: ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕರಿಕೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ೨೦ ಕೋಟಿ ರೂ. ಗೂ ಹೆಚ್ಚು ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಸೋಮವಾರ ಉದ್ಘಾಟಿಸಿದರು.

ಕರಿಕೆ ಗ್ರಾಮದ ಪಚ್ಚೆಪಿಲಾವುನಲ್ಲಿ ೪ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಆಶ್ರಮ ಆದಿವಾಸಿ ಬುಡಕಟ್ಟು ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಸರ್ಕಾರ ಬುಡಕಟ್ಟು ಆದಿವಾಸಿ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಆ ನಿಟ್ಟಿನಲ್ಲಿ ಕುಗ್ರಾಮಗಳಲ್ಲೂ ಸಹ ವಸತಿ ಶಾಲೆಗಳನ್ನು ಆರಂಭಿಸಿ ಒಳ್ಳೆಯ ಶಿಕ್ಷಣ ನೀಡಲು ಮುಂದಾಗಿದೆ ಎಂದು ಹೇಳಿದರು.

ಸರ್ಕಾರ ಎಲ್ಲಾ ವರ್ಗದ ಜನರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಆದಿವಾಸಿ ವಿದ್ಯಾರ್ಥಿಗಳು ಸಹ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಯ ಸದುಪಯೋಗ ಪಡೆದು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ತಿಳಿಸಿದರು.

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಅವುಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಗ್ರಾ.ಪಂ.ಅಧ್ಯಕ್ಷ ಬಾಲಚಂದ್ರನ್ ನಾಯರ್, ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ಎಸ್.ಹೊನ್ನೇಗೌಡ, ತಾಲೂಕು ಅಧಿಕಾರಿ ಬಾಲಕೃಷ್ಣ ರೈ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಇತರರು ಇದ್ದರು.

ಬಳಿಕ ಚೆತ್ತುಕಾಯ ಅರಣ್ಯ ಪ್ರವಾಸಿ ಮಂದಿರ ಬಳಿ ೧೫ ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು. ಪೊಂಗಾರು ರಸ್ತೆಯಲ್ಲಿ ೮೫ ಲಕ್ಷ ರೂ. ವೆಚ್ಚದ ಹೊಸ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಾಗೆಯೇ ಆರ್ತುಕುಟ್ಟಿ ರಸ್ತೆಯಲ್ಲಿ ೭೦ ಲಕ್ಷ ರೂ. ವೆಚ್ಚದ ಕಿಂಡಿ ಅಣೆಕಟ್ಟು ಸೇತುವೆ ಉದ್ಘಾಟಿಸಿದರು. ಬಳಿಕ ಕರಿಕೆ ಗ್ರಾ.ಪಂ.ವ್ಯಾಪ್ತಿಯ ೭೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮಡೆಕಾನ ರಸ್ತೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರ ಅಹವಾಲು ಆಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net