

| ರಾಜು ಎಸ್. ಗಾಲಿ ಅಥಣಿ
ಸರ್ಕಾರ ಕೋಟ್ಯಂತರ ರೂ. ಅನುದಾನ ಖರ್ಚು ಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಮತ್ತು ಉಚಿತ ಶಿಕ್ಷಣ ಸಿಗಲು ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗಳನ್ನು ನಿರ್ಮಿಸುತ್ತಿದೆ. ಆದರೆ, ಕಟ್ಟಡ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿರುವ ಇಲಾಖೆಗಳು ಮಾತ್ರ ಕಳಪೆ ಕಾಮಗಾರಿಯ ಕಟ್ಟಡ ನಿರ್ಮಿಸಿ ಕೈ ತೊಳೆದುಕೊಳ್ಳುತ್ತಿವೆ.
ಇದಕ್ಕೆ ಉತ್ತಮ ಉದಾಹರಣೆ ಅಥಣಿ ಪಟ್ಟಣದ ಅನಂತಪುರ ರಸ್ತೆಯಲ್ಲಿ ಸುಮಾರು 5 ಎಕರೆ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಸರ್ಕಾರಿ ಕಲಾ, ವಿಜ್ಞಾನ, ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಕಟ್ಟಡ. ಫೆ. 29ರಂದು ಇದರ ಉದ್ಘಾಟನೆಯಾಗಲಿದೆ. ಆದರೆ, ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಮಾತ್ರ ಕಳಪೆಯಾಗಿ ನಿರ್ಮಾಣವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಕಟ್ಟಡದ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿಗಾಗಿ ಒಟ್ಟು ತರಗತಿಗಾಗಿ 5 ಕೋಣೆ ಮತ್ತು 2 ಕೋಣೆ ವಿಜ್ಞಾನ ಪ್ರಯೋಗಾಲಯಕ್ಕೆ ಮೀಸಲಾಗಿದೆ. ಆದರೆ, ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಭೂ ಸೇನಾ ನಿಗಮವು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವುದು ಕಟ್ಟಡದ ಒಳ ಹೋಗುತ್ತಿದ್ದಂತೆ ಎದ್ದು ಕಾಣುತ್ತದೆ.
ಎರಡು ವರ್ಷಗಳಿಂದ ಕಾಮಗಾರಿ: ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆದಿದೆ. ಎರಡು ಪ್ರಯೋಗಾಲಯ ಮತ್ತು 4 ತರಗತಿ ಕೊಠಡಿ ನಿರ್ಮಾಣಕ್ಕೆ ಎರಡು ವರ್ಷ ತೆಗೆದುಕೊಂಡಿದ್ದಾರೆ. ಇನ್ನು ಕಟ್ಟಡಕ್ಕೆ ಸುಣ್ಣ, ಬಣ್ಣ, ವಿದ್ಯುತ್ ಸಂಪರ್ಕ, ಗ್ರಿಲ್ ಅಳವಡಿಕೆ, ಬಾಗಿಲು, ಕಬ್ಬಿಣ ಕಿಟಕಿಗಳು, ಪ್ರಯೋಗಾಲಯದ ಸಲಕರಣೆ ಸೇರಿ ಇತರ ಕಳಪೆಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ಕಡಿಮೆ ಮೌಲ್ಯದ ವಸ್ತುಗಳನ್ನು ಕಟ್ಟಡಕ್ಕೆ ಉಪಯೋಗಿಸಿದ್ದರಿಂದ ಈ ಕಟ್ಟಡ ಎಷ್ಟು ದಿನ ಬಾಳಿಕೆ ಬರುತ್ತದೆ ಎನ್ನುವ ಪ್ರಶ್ನೆ ಮೂಡಿದೆ.
ಪಟ್ಟಣದ ಹೊರ ವಲಯದಲ್ಲಿ ಕಾಲೇಜ್ ನಿರ್ಮಿಸಿರುವುದರಿಂದ ಇದರ ಸಮರ್ಪಕ ನಿರ್ವಹಣೆ ಅಗತ್ಯವಿದೆ. ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಿ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಇದು ಪುಂಡ ಪೋಕರಿಗಳ ಅಡ್ಡೆಯಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಸ್ಥಳೀಯ ಜನಪ್ರತಿನಿಧಿಗಳಾದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಅವರು ತಾಲೂಕಿನಲ್ಲಿ ಕೈಗೊಂಡಿರುವ ಸರ್ಕಾರಿ ಕಾಮಗಾರಿಗಳ ಮೇಲೆ ನಿಗಾ ವಹಿಸಬೇಕು. ಗುಣಮಟ್ಟದ್ದಾಗಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಭೂ ಸೇನಾ ನಿಗಮದಿಂದ ಕಾಲೇಜ್ ನಿರ್ಮಿಸಲಾಗಿದೆ. ಕಟ್ಟಡ ಕಳಪೆಯಾಗಿ ನಿರ್ಮಿಸಿದ್ದರೆ ಅವರೇ ಹೊಣೆ. ಸರ್ಕಾರಿ ಕಾಲೇಜಿಗೆ ಗ್ರಾಮೀಣ ಮತ್ತು ಪಟ್ಟಣದ ಬಡ ವಿದ್ಯಾರ್ಥಿಗಳು ಹೆಚ್ಚು ಬರುತ್ತಾರೆ. ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ ನೀಡುತ್ತಿದ್ದೇವೆ. ಇನ್ನು ಹೊಸ ಕಟ್ಟಡದಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ.| ಆರ್.ಎ. ಬೆಲೆಕರ ಪ್ರಭಾರ ಪ್ರಾಚಾರ್ಯಪಪೂ ಮಹಾವಿದ್ಯಾಲಯಕ್ಕೆ ಭೂ ಸೇನಾ ನಿಗಮದಿಂದ ವಿಜ್ಞಾನ ಪ್ರಯೋಗಾಲಯಕ್ಕೆ 81.75 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಹೆಚ್ಚುವರಿಯಾಗಿ 4 ತರಗತಿ ಕೊಠಡಿ ನಿರ್ಮಿಸಲು 68 ಲಕ್ಷ ರೂ. ವೆಚ್ಚವಾಗಿದೆ. ಕಳಪೆ ಕಾಮಗಾರಿ ಕುರಿತು ಪರಿಶೀಲಿಸಲಾಗುವುದು.| ಎ.ಜಿ. ಷಣ್ಮುಕಪ್ಪ ಭೂ ಸೇನೆಯ ಸಹಾಯಕ ನಿರ್ದೇಶಕ