

ಶ್ರೀರಂಗಪಟ್ಟಣ: ಸಹಕಾರ ಸಂಘದ ಚಿಲ್ಲರೆ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮತ್ತು ನೇರ ನಗದು ವ್ಯವಹಾರದ ಮೂಲಕ ಗೊಬ್ಬರ ಮಾರಾಟ ಮಾಡಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಟ್ಟಡದಲ್ಲಿ ಸೋಮವಾರ ಸಂಘದ ವತಿಯಿಂದ ಆರಂಭಿಸಲಾದ ರಸಗೊಬ್ಬರ ಚಿಲ್ಲರೆ ಮಾರಾಟ ಕೇಂದ್ರದ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಗಿತಗೊಂಡಿದ್ದ ರಸಗೊಬ್ಬರ ಮಾರಾಟ ಕೇಂದ್ರವನ್ನು ಮರು ಆರಂಭಿಸಿಲಾಗಿದ್ದು, ಇದರ ಸದುಪಯೋಗ ಕ್ಷೇತ್ರದ ರೈತರಿಗೆ ಲಭಿಸಲಿ. ರಾಜ್ಯದಲ್ಲಿ ಪ್ರಸ್ತುತ ಗೊಬ್ಬರದ ಲಭ್ಯತೆ ಕಡಿಮೆ ಇದ್ದು, ಅವಶ್ಯಕತೆಗಷ್ಟೇ ಬಳಕೆಗೆ ತಿಳಿಸಿ. ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಅಥವಾ ಚೆಕ್ ಪಡೆದು ಗೊಬ್ಬರ ಮಾರಾಟ ಮಾಡದೆ, ಕಡ್ಡಾಯವಾಗಿ ನೇರ ನಗದು ಮೂಲಕ ವ್ಯವಹರಿಸಿ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ತಾಲೂಕಿನ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಾಸಕರ ಸಹಕಾರದೊಂದಿಗೆ ಹಂತ ಹಂತವಾಗಿ ಸಂಘದ ಅಭಿವೃದ್ಧಿ ಕಡೆ ಗಮನಹರಿಸಲಾಗಿದೆ. ಸಂಘ ಬಾಕಿ ಉಳಿಸಿಕೊಂಡಿದ್ದ ಲಕ್ಷಾಂತರ ರೂ. ಆಸ್ತಿ ತೆರಿಗೆ ಪಾವತಿ, ಷೇರುದಾರರ ಅಭ್ಯುದಯಕ್ಕಾಗಿ ಠೇವಣಿಯೊಂದಿಗೆ ಬ್ಯಾಂಕ್ ಶಾಖೆ ಪ್ರಾರಂಭಿಸಲಾಗಿತ್ತು. ಈ ಹಿಂದೆ ನೀಡಿದ್ದ ಭರವಸೆಯಂತೆ ಕಳೆದ 7 ವರ್ಷಗಳಿಂದ ರದ್ದುಗೊಂಡಿದ್ದ ಹೋಲ್‌ಸೇಲ್ ಹಾಗೂ ಸಗಟು ಗೊಬ್ಬರ ಘಟಕದಲ್ಲಿ ಇದೀಗ ಮರು ಪರವಾನಿಗೆ ಪಡೆದು ಚಿಲ್ಲರೆ ಗೊಬ್ಬರ ಮಾರಾಟ ಕೇಂದ್ರ ಪ್ರಾರಂಭಿಸಲಾಗಿದೆ ಎಂದರು.
ಶೀಘ್ರವೇ ಸಗಟು ವ್ಯಾಪಾರ ಕೇಂದ್ರವನ್ನು ಸಹ ತೆರಲಾಗುತ್ತದೆ. ಜತೆಗೆ ಸಂಘದಲ್ಲೇ ರೈತರಿಗೆ ಅನೂಕೂಲತೆ ಕಲ್ಪಿಸಲು ಬಿತ್ತನೆ ಬೀಜ ಹಾಗೂ ಪಶು ಔಷಧಿಗಳ ಮಾರಾಟ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಪ್ರಮುಖವಾಗಿ ತಾಲೂಕಿನ ಸಂಘವು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಗಂಜಾಂ ರಸ್ತೆಯ ಬಳಿ ಇರುವ ಸಂಘದ ನಿವೇಶನದಲ್ಲಿ ಅಮೃತಭವನ ನಿರ್ಮಿಸಲು ಶಾಸಕರಿಗೆ ಮನವಿ ಮಾಡಲಾಗಿದ್ದು, ನೆರವು ನೀಡುವ ಭರವಸೆ ನೀಡಿದ್ದಾರೆ ಎಂದರು.
ಪುರಸಭಾ ಅಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯ ಎಸ್.ಎನ್.ದಯಾನಂದ್, ಟಿಎಪಿಸಿಎಂಎಸ್ ಸಂಘದ ನಿರ್ದೇಶಕರಾದ ಕಾಂತಮಣಿ, ರಾಮಲಿಂಗೇಗೌಡ, ನರಸಿಂಹೇಗೌಡ, ಶ್ರೀನಿವಾಸ್, ನೂತನ ನಿರ್ದೇಶಕರಾದ ಸತೀಶ್, ಕೃಷ್ಣ, ಸಂಘದ ಕಾರ್ಯದರ್ಶಿ ಪಾರ್ವತಮ್ಮ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಪಿಎಸ್‌ಐ ಶಿವಲಿಂಗ ದಳವಾಯಿ ಇದ್ದರು.