

ಉಡುಪಿ: ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ಹೊಸ ಮಧ್ಯಸ್ಥಿಕೆದಾರರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಆಯ್ಕೆಯಾದವರಿಗೆ 40 ಗಂಟೆಗಳ ವಿಶೇಷ ತರಬೇತಿ ನೀಡಲಾಗುವುದು ಎಂದು ಹ್ಯೆಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ನ್ಯಾ. ಇ.ಎಸ್.ಇಂದಿರೇಶ್ ಹೇಳಿದರು.
ಜಿಲ್ಲಾ ನ್ಯಾಯಾಲಯದ ನಾಲ್ಕನೇ ಮಹಡಿಯಲ್ಲಿ ಶುಕ್ರವಾರ ವಕೀಲರ ಸಂಘದ ಸ್ಥಳಾಂತರಿತ ಕಚೇರಿಯನ್ನು ಉದ್ಘಾಟಿಸಿ, ಮಾತನಾಡಿದರು. ವಕೀಲ ವೃತ್ತಿಯಲ್ಲಿರುವಷ್ಟು ಸ್ವಾತಂತ್ರ್ಯ ಯಾವುದೇ ಕೆಲಸಗಳಲ್ಲಿಲ್ಲ. ನ್ಯಾಯಾಂಗ ಸೇವೆಯಲ್ಲಿರುವವರು ಸದಾಕಾಲ ವಿದ್ಯಾರ್ಥಿಗಳಾಗಿದ್ದು, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು. ವಕೀಲರು ಮಂಡಿಸುವ ವಿಚಾರದ ಆಧಾರದಲ್ಲಿ ಉತ್ತಮ ತೀರ್ಪು ಬರಲು ಸಾಧ್ಯವಿದೆ ಎಂದರು. ಮನೆಯಲ್ಲಿ ದೇವರಮನೆ ಗುಣಮಟ್ಟ ಮನೆಯ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ ವಕೀಲರ ಸಂಘದಲ್ಲಿ ಉತ್ತಮ ವ್ಯವಸ್ಥೆಗಳಿದ್ದರೆ ಸಂದ ಶ್ರೇಷ್ಠತೆ ಅರಿವಾಗುತ್ತದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನಿಲ್ ಟಿ.ಮಸರಡ್ಡಿ ಉಪಸ್ಥಿತರಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವಿಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್.ವಂದಿಸಿದರು. ನ್ಯಾಯವಾದಿ ರೂಪಶ್ರೀ ಪ್ರಾರ್ಥಿಸಿ, ಸಹನಾ ಕುಂದರ್ ನಿರೂಪಿಸಿದರು.