

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪಾಡ್ ಹೋಟೆಲ್ಗಳು ಮತ್ತು ಸುಸಜ್ಜಿತ ಲಾಂಜ್ ನಿರ್ಮಾಣಕ್ಕೆ 3 ತಿಂಗಳಲ್ಲಿ ಟೆಂಡರ್ ಅಹ್ವಾನಿಸಲಾಗುವುದು ಎಂದು ಕೊಂಕಣ ರೈಲ್ವೆಯ ಕಾರ್ಯಾಚರಣೆ ವಿಭಾಗ ನಿರ್ದೇಶಕ ಸಂತೋಷ್ ಕುಮಾರ್ ಝಾ ತಿಳಿಸಿದ್ದಾರೆ.
ಉಡುಪಿ ರೈಲ್ವೇ ನಿಲ್ದಾಣದಲ್ಲಿ ನೂತನವಾಗಿ ನವೀಕರಣಗೊಂಡಿರುವ ವಿಶ್ರಾಂತಿ ಕೊಠಡಿ ಹಾಗೂ ಡಾರ್ಮೆಂಟರಿ ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿಗೆ ದೇಶಾದ್ಯಂತ ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿ ಸಾವಿರಾರು ಜನರು ಆಗಮಿಸುತ್ತಾರೆ. ಪಾಡ್ ಹೋಟೆಲ್ ಹೊಸ ಪರಿಕಲ್ಪನೆಯಾಗಿದ್ದು, ಇತರ ಹೋಟೆಲ್ಗಳು ಕನಿಷ್ಠ 12 ಅಥವಾ 24 ಗಂಟೆಗಳ ಚೆಕ್-ಇನ್ ಮತ್ತು ಚೆಕ್ ಔಟ್ ಸಮಯವನ್ನು ಹೊಂದಿರುತ್ತವೆ. ಆದರೆ ಪಾಡ್ ಹೋಟೆಲ್ ಸೌಲಭ್ಯವನ್ನು ಪ್ರಯಾಣಿಕರ ಅಗತ್ಯತೆಯ ಆಧಾರದ ಮೇಲೆ 6,12,18 ಅಥವಾ 24 ಗಂಟೆಗಳ ಅವಧಿಗೆ ಬಳಸಿಕೊಳ್ಳಬಹುದು. ಭಾರತೀಯ ರೈಲ್ವೆಯ ಮುಂಬೈ, ಚೆನ್ನೈನಂತಹ ನಿಲ್ದಾಣಗಳಲ್ಲಿ ಈಗಾಗಲೇ ಇಂಥ ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿದೆ. ಇಂತಹ ಸೇವೆಗಳನ್ನು ಒದಗಿಸುವ ಕೆಲವೇ ಕೆಲವು ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಪಾಡ್ ಹೋಟೆಲ್ ಸೌಲಭ್ಯವನ್ನು ನಿರ್ಮಿಸಲು ಸ್ಥಳ ಪರಿಶೀಲಿಸುತ್ತಿದ್ದೇವೆ. ಇದು ಸುಮಾರು 2 ರಿಂದ -3 ಸಾವಿರ ಚದರ ಅಡಿ ಸ್ಥಳದಲ್ಲಿ ಹೋಟೆಲ್ ನಿಮಾರ್ಣವಾಗಲಿದೆ. ಇದಕ್ಕೆ 40 ರಿಂದ 50 ಲಕ್ಷ ರೂ. ವೆಚ್ಚವಾಗಲಿದೆ. 6 ಗಂಟೆಗಳ ಕಾಲ ವಾಸ್ತವ್ಯಕ್ಕೆ ಸುಮಾರು 300 ರಿಂದ 400 ರೂ ಶುಲ್ಕ ವಿಧಿಸಲಾಗುತ್ತದೆ ಎಂದರು.
ಮೊದಲು ಕೊಂಕಣ ರೈಲ್ವೆಯ ಮಡಗಾಂವ್ ರೈಲು ನಿಲ್ದಾಣದಲ್ಲಿ ವಿಮಾನ ನಿಲ್ದಾಣ ಮಾದರಿಯ ಲಾಂಜ್ ಸೌಲಭ್ಯವನ್ನು ನಿಮಾರ್ಣ ಮಾಡಿದ್ದೇವೆ. ವಿಶ್ವ ದರ್ಜೆಯ ಸೌಲಭ್ಯ ಹೊಂದಿದ್ದು, ಪ್ರಯಾಣಿಕರ ಸ್ನೇಹಿಯಾಗಿದೆ. ಅದೇ ಮಾದರಿಯಲ್ಲಿ ಉಡುಪಿಯಲ್ಲೂ ಎಕ್ಸಿಕ್ಯೂಟಿವ್ ಲಾಂಜ್ ಆರಂಭಿಸಲಾಗುವುದು. ಎಕ್ಸಿಕ್ಯೂಟಿವ್ ಲಾಂಜ್ನಲ್ಲಿ ಆರಾಮದಾಯಕ ಸೋಫಾಗಳು, ಟಿವಿ, ಆಮ್ರ್ರೆಸ್ಟ್ ಕುರ್ಚಿಗಳು, ಮಸಾಜ್ ಪಾರ್ಲರ್, ಮಾಹಿತಿ ಫಲಕ, ಪ್ಯಾಂಟ್ರಿ, ವೈಫ್-ಫೈ ಸೇವೆ ಲಭ್ಯವಿರಲಿದೆ. ಪ್ರಸ್ತುತ ಮಡಗಾಂವ್ ನಿಲ್ದಾಣದಲ್ಲಿ ಎರಡು ಗಂಟೆಗೆ 50 ರೂ ದರ ನಿಗದಿ ಮಾಡಿದ್ದೇವೆ ಎಂದರು.
ಮಂಗಳೂರು-ಮಡಗಾಂವ್ ಮಾರ್ಗಕ್ಕೆ ವಂದೇ ಭಾರತ್ ರೈಲು ಸಿಗುವ ನಿರೀಕ್ಷೆಯಲ್ಲಿದ್ದೇವೆ. ಕೊಂಕಣ ರೈಲ್ವೇ ದ್ವಿಗುಣಗೊಳಿಸುವ ಕುರಿತು ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಇದು ಪರಿಗಣನೆಯಲ್ಲಿದೆ. ಕೊಂಕಣ ರೈಲ್ವೆಯ ವಿದ್ಯುದಿಕರಣ ಪೂರ್ಣಗೊಂಡಿದೆ. ಶೇ. 70ರಷ್ಟು ರೈಲುಗಳು ಎಲೆಕ್ಟ್ರಿಕ್ ಲೊಕೊದಲ್ಲಿ ಚಲಿಸುತ್ತಿವೆ. ಉಡುಪಿ ಮತ್ತು ತೋಕೂರಿನಲ್ಲಿ ಮುಂದಿನ ಮೂರು ತಿಂಗಳಲ್ಲಿ ಹೊಸ ಬೃಹತ್ ಗೋದಾಮು ನಿರ್ಮಿಸಲಾಗುವುದು ಎಂದು ಹೇಳಿದರು.
ಕೊಂಕಣ ರೈಲ್ವೇಸ್ ಕಾರವಾರದ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಿ.ಬಿ ನಿಕಮ್, ಕಮರ್ಷಿಯಲ್ ಮ್ಯಾನೇಜರ್ ಆರ್.ಡಿ. ಗೊಲಾಬ್, ಅಧಿಕಾರಿಗಳಾದ ವಿನಯಕುಮಾರ್, ಶಶಿಧರ್, ಪಿಅರ್ಒ ಸುಧಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.