

ಉಡುಪಿ: ಒನಕೆ ಓಬವ್ವಳ ನಿಸ್ವಾರ್ಥ ನಾಡಪ್ರೇಮ ಮಾದರಿಯಾಗಿದೆ. ಆಕೆ ಚಿತ್ರದುರ್ಗದ ಕೋಟೆಯನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸಲು ಒನಕೆಯನ್ನು ಆಯುಧವಾಗಿ ಹಿಡಿದು ಶತ್ರುಗಳನ್ನು ಸಂಹಾರ ಮಾಡಿದ್ದರಿಂದ ಚರಿತ್ರೆಯಲ್ಲಿ ಅಜರಾಮರಳಾಗಿ, ಸ್ತ್ರೀ ಶಕ್ತಿಯ ಸಂಕೇತವಾಗಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೆೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಉದ್ಘಾಟಿಸಿ, ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಹೆಣ್ಣುಮಗಳು, ಅಸಾಮಾನ್ಯವಾಗಿ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ, ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದ ಆಕೆಯ ಸಾಹಸ, ಇಂದು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.
ದೇಶದ ಇತಿಹಾಸವನ್ನು ಗಮನಿಸಿದಾಗ ಪುರುಷರಷ್ಟೇ ಮಹಿಳೆಯರು ಕೂಡ ಪ್ರಭಾವಶಾಲಿಗಳಾಗಿ ಅವರಿಗೆ ಸರಿಸಮಾನರಾಗಿ ದಿಟ್ಟತನದಿಂದ ಹೋರಾಡಿರುವುದನ್ನು ಕಾಣಬಹುದಾಗಿದೆ. ವೀರ ವನಿತೆ ಒನಕೆ ಓಬವ್ವಳ ಸಮಯಪ್ರಜ್ಞೆ, ಧೈರ್ಯ, ಪ್ರಾಮಾಣಕತೆ, ಸಂವೇದನಾಶೀಲತೆ ಮತ್ತು ಸಾಹಸ ದಂತಹ ಧೀಮಂತ ವ್ಯಕ್ತಿತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಒನಕೆ ಓಬವ್ವ ಅವರ ಕುರಿತು ಉಪನ್ಯಾಸ ನೀಡಿ, ಚಿತ್ರದುರ್ಗದ ಉಕ್ಕಿನಂತಹ ಏಳು ಸುತ್ತಿನ ಕೋಟೆಯನ್ನು ಹೈದರಾಲಿಯ ಸೈನಿಕರು ಕುತಂತ್ರದಿಂದ ವಶಪಡಿಸಿಕೊಳ್ಳಲು ಹಠಾತ್ತಾಗಿ ಆಕ್ರಮಣ ಮಾಡಿದಾಗ, ಓಬವ್ವ ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು, ಶತ್ರುಗಳನ್ನು ಎದುರಿಸಿ, ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದ ಕೊಂದಿದ್ದಳು. ಪ್ರಸ್ತುತ ಆ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕೋಶಾಧಿಕಾರಿ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.