

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಹಾಲಿನ ಬೆಲೆ ಹೆಚ್ಚಳವಾದರೆ ರೈತರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಮುಲ್ ಉಪಾಧ್ಯಕ್ಷ ಕೆ.ಎಂ.ಎಂ.ಮಂಜುನಾಥ್ ಹೇಳಿದರು.
ಹೋಬಳಿಯ ಮಲ್ಲೇಪುರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2ನೇ ಹಂತದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಲೀಟರ್ ಹಾಲಿಗೆ 3 ರೂ. ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹಾಲಿನ ಬೆಲೆ ಮತ್ತಷ್ಟು ಹೆಚ್ಚಬಹುದು ಎಂದ ಅವರು, ಹೈನುಗಾರಿಕೆಗೆ ಬಮುಲ್‌ನಿಂದ ಹಲವು ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಪ್ರಯೋಜನ ಪಡೆದು ರೈತರು ಹೈನುಗಾರಿಕೆಯಲ್ಲಿ ಪ್ರಗತಿ ಹೊಂದಬೇಕು ಎಂದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ.ಗಂಗಯ್ಯ ಮಾತನಾಡಿ, ತಾಲೂಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಮೇಲೆ ಹೈನುಗಾರಿಕೆ ಕಡಿಮೆಯಾಗುತ್ತಿದೆ. ಆದರೆ, ರೈತರಿಗೆ ಆರ್ಥಿಕತೆ ಹೆಚ್ಚಳವಾಗಬೇಕಾದರೆ ಹಾಲು ಮತ್ತು ರೇಷ್ಮೆಯಿಂದ ಮಾತ್ರ ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಎಂ.ಮುನಿಯಪ್ಪ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘ ಅಭಿವೃದ್ಧಿಯಾಗುತ್ತಿದೆ. ರೈತರು ಇನ್ನು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಸಂಘ ಅಭಿವೃದ್ಧಿಯಾಗುತ್ತದೆ ಎಂದರು.
ಬೆಂಗಳೂರು ಪೂರ್ವ ತಾಲೂಕಿನ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಎಂ.ಶ್ರೀನಿವಾಸ್, ಸಹಾಯಕ ವ್ಯವಸ್ಥಾಪಕ ಪ್ರಭಾರ ಕೆ.ಎಸ್.ಹನುಮಂತಪ್ಪ, ನಿರ್ದೇಶಕರಾದ ಮುನಿಶಾಮಪ್ಪ, ನಾಗರಾಜು, ದೊಡ್ಡ ದ್ಯಾವಪ್ಪ, ರಾಮಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಕದಿರಪ್ಪ, ಗ್ರಾಪಂ ಮಾಜಿ ಸದಸ್ಯ ರಘು, ಮುಖಂಡರಾದ ಸಿ.ನಾರಾಯಣಸ್ವಾಮಿ, ಸಿಇಒ ಮಂಜುನಾಥ್, ಹಾಲು ಪರೀಕ್ಷಕ ನಾಗೇಶ್ ಇದ್ದರು.